×
Ad

ಬೆಂಗಳೂರು | ಕೆಎಎಸ್ ಪೂರ್ವಭಾವಿ ಮರುಪರೀಕ್ಷೆ ನಡೆಸಲು ಆಗ್ರಹ

Update: 2025-05-01 00:04 IST

ಬೆಂಗಳೂರು : ಸಿಎಂ ಸಿದ್ದರಾಮಯ್ಯ ಕೂಡಲೇ ಸಚಿವ ಸಂಪುಟ ಸಭೆ ಕರೆದು ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳಿಗೆ ಮರುಪರೀಕ್ಷೆ ನಡೆಸಲು ತೀರ್ಮಾನ ತೆಗೆದುಕೊಳ್ಳಬೇಕು ಎಂದು ಅಖಿಲ ಕರ್ನಾಟಕ ವಿದ್ಯಾರ್ಥಿ ಮತ್ತು ಸಂಶೋಧಕರ ಸಂಘಟನೆಯ ಉಪಾಧ್ಯಕ್ಷ ಸಂತೋಷ್ ಮರೂರು ಆಗ್ರಹಿಸಿದ್ದಾರೆ.

ಬುಧವಾರ ನಗರದ ಫ್ರೀಡಂಪಾರ್ಕ್‌ನಲ್ಲಿ ಕರ್ನಾಟಕ ರಾಜ್ಯ ರೈತೋದಯ ಹಸಿರು ಸೇನೆ ಮತ್ತು ಕರ್ನಾಟಕ ವಿದ್ಯಾರ್ಥಿ ಮತ್ತು ಸಂಶೋಧಕರ ಸಂಘಟನೆಯ ವತಿಯಿಂದ ಹಮ್ಮಿಕೊಂಡಿದ್ದ ಹೋರಾಟದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಇತ್ತೀಚೆಗೆ 384 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳಿಗೆ ಕೆಪಿಎಸ್‌ಸಿ ನಡೆಸಿದ್ದ ಪರೀಕ್ಷೆಯ 2ರ ಪತ್ರಿಕೆಗಳಲ್ಲಿ 79 ದೋಷಗಳಿದ್ದರೂ, ಕೆಪಿಎಸ್‌ಸಿ ಕೇವಲ 5 ಪ್ರಶ್ನೆಗಳಿಗೆ ಮಾತ್ರ ಕೃಪಾಂಕ ನೀಡುವ ಮೂಲಕ ಕನ್ನಡ ಮಾಧ್ಯಮದ ಪರೀಕ್ಷಾರ್ಥಿಗಳಿಗೆ ಅನ್ಯಾಯ ಮಾಡಿದೆ. ಕರ್ನಾಟಕ ಆಡಳಿತ ನ್ಯಾಯಮಂಡಳಿ (ಕೆಎಟಿ) ದೋಷಪೂರಿತ ಪ್ರಶ್ನೆಗಳನ್ನು ಮತ್ತೊಮ್ಮೆ ತಜ್ಞರ ಸಮಿತಿ ಮುಂದಿಟ್ಟು ಸೂಕ್ತ ನಿರ್ಧಾರ ಕೈಗೊಳ್ಳಿ ಎಂದು ಕೆಪಿಎಸ್‌ಸಿಗೆ ಆದೇಶ ನೀಡಿದೆ. ಕೆಎಟಿ ಆದೇಶ ನೀಡಿದ ಮೇಲೂ ಕೆಪಿಎಸ್‌ಸಿಗೆ ಮುಖ್ಯ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದು, ಮೇ 3ರಿಂದ ಪರೀಕ್ಷೆಗಳು ನಡೆಯಲಿವೆ ಎಂದು ಮಾಹಿತಿ ನೀಡಿದರು.

ಸಿಎಂ ಸಿದ್ದರಾಮಯ್ಯ ಅಧಿವೇಶನದಲ್ಲಿ ಮಾತನಾಡುತ್ತಾ, ಕೆಎಎಸ್ ಪೂರ್ವಭಾವಿ ಮರುಪರೀಕ್ಷೆ ವಿಷಯ ನ್ಯಾಯಾಲಯದಲ್ಲಿ ಇರುವುದರಿಂದ ಮಧ್ಯಪ್ರವೇಶ ಸಾಧ್ಯವಿಲ್ಲ. ನ್ಯಾಯಾಲಯದ ತೀರ್ಪಿನ ನಂತರವೂ ವಿದ್ಯಾರ್ಥಿಗಳಿಗೆ ಅನ್ಯಾಯವಾಗುವ ಸನ್ನಿವೇಶ ನಿರ್ಮಾಣವಾದರೆ, ಸರ್ವಪಕ್ಷ ಸಭೆ ಕರೆದು ತೀರ್ಮಾನ ಕೈಗೊಂಡು ನ್ಯಾಯ ಒದಗಿಸುವುದಾಗಿ ಭರವಸೆ ನೀಡಿದ್ದರು. ಈಗ ಆ ಸನ್ನಿವೇಶ ಬಂದಿರುವುದರಿಂದ ಕೂಡಲೇ ಸರ್ವಪಕ್ಷ ಸಭೆ ಕರೆದು ತೀರ್ಮಾನ ತೆಗೆದುಕೊಳ್ಳಬೇಕು ಮತ್ತು ಮೇ 3ರಿಂದ ನಡೆಯಬೇಕಿರುವ ಮುಖ್ಯ ಪರೀಕ್ಷೆಯನ್ನು ಕೂಡಲೇ ಸ್ಥಗಿತಗೊಳಿಸಬೇಕು ಎಂದು ಸಂತೋಷ್ ಮರೂರು ಒತ್ತಾಯಿಸಿದರು.

ಹೋರಾಟದಲ್ಲಿ ಕರ್ನಾಟಕ ರೈತೋದಯ ಹಸಿರು ಸೇನೆಯ ರಾಜ್ಯಾಧ್ಯಕ್ಷ ರಾಜಶೇಖರ್, ಸಂಚಾಲಕ ಕುರುವಂತಪ್ಪ, ಶಿವಮೊಗ್ಗ ಜಿಲ್ಲಾಧ್ಯಕ್ಷ ಕಾರ್ತೀಕ್, ಧಾರವಾಡ ಜಿಲ್ಲಾಧ್ಯಕ್ಷ ಅನೀಲ್ ಕಾಂಬ್ಲೆ ಸೇರಿದಂತೆ ಹಲವು ಪರೀಕ್ಷಾ ಆಕಾಂಕ್ಷಿಗಳು ಭಾಗವಹಿಸಿದ್ದರು.

ಕೆಎಟಿ ನೀಡಿದ ಆದೇಶವನ್ನು ಪ್ರಶ್ನಿಸಿ ಅನೇಕ ವಿದ್ಯಾರ್ಥಿಗಳು ಹೈಕೋರ್ಟ್ ಮೊರೆ ಹೋಗಿದ್ದರು. ಎ.24 ರಂದು ಅರ್ಜಿಗಳನ್ನು ವಿಚಾರಣೆ ನಡೆಸಿದ ಹೈಕೋರ್ಟ್, ಅರ್ಜಿಗಳನ್ನು ಸಲ್ಲಿಸಿದ ಎಲ್ಲ 32 ವಿದ್ಯಾರ್ಥಿಗಳಿಗೆ ಮುಖ್ಯ ಪರೀಕ್ಷೆ ಬರೆಯಲು ಅವಕಾಶ ಒದಗಿಸಿ ಆದೇಶ ನೀಡಿದೆ. 32 ವಿದ್ಯಾರ್ಥಿಗಳಿಗೆ ಸಿಕ್ಕಿರುವ ಅವಕಾಶ ಕನ್ನಡ ಮಾಧ್ಯಮದಲ್ಲಿ ಪರೀಕ್ಷೆ ಬರೆದಿರುವ 70 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸಿಕ್ಕಿಲ್ಲ. ಹೈಕೋರ್ಟ್ ಮುಂದೆ ಬರದ ವಿದ್ಯಾರ್ಥಿಗಳಿಗೆ ಮುಖ್ಯ ಪರೀಕ್ಷೆ ಬರೆಯುವ ಅವಕಾಶ ಇಲ್ಲವೆಂದರೆ ಅವರೇನು ಮಾಡಬೇಕು?.

-ಸಂತೋಷ್ ಮರೂರು, ಅಖಿಲ ಕರ್ನಾಟಕ ವಿದ್ಯಾರ್ಥಿ ಮತ್ತು ಸಂಶೋಧಕರ ಸಂಘಟನೆಯ ಉಪಾಧ್ಯಕ್ಷ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News