ಪಶುವೈದ್ಯರ ನೇಮಕಾತಿಯಲ್ಲಿ ಭ್ರಷ್ಟಾಚಾರ ಆರೋಪ; ಸಮಗ್ರ ತನಿಖೆಯಾಗಬೇಕು: ಬಿ.ವೈ.ವಿಜಯೇಂದ್ರ

Update: 2026-07-26 20:58 IST

ಬೆಂಗಳೂರು : ಕೆಪಿಎಸ್‍ಸಿ ಮೂಲಕ ನಡೆದ 400 ಪಶುವೈದ್ಯರ ನೇಮಕಾತಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪ ಕೇಳಿಬಂದಿದ್ದು, ಈ ಕುರಿತು ಸಂಪೂರ್ಣ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಗ್ರಹಿಸಿದ್ದಾರೆ.

ರವಿವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕೆಪಿಎಸ್‍ಸಿ ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಆಡಿಯೋ ಲೀಕ್ ಆಗಿರುವುದು ಗಂಭೀರ ಬೆಳವಣಿಗೆ. ಅಭ್ಯರ್ಥಿಗಳು ಹಣ ನೀಡಿದರೆ ಹೆಚ್ಚಿನ ಅಂಕಗಳನ್ನು ಕೊಡಿಸುವುದಾಗಿ ಅದರಲ್ಲಿ ಹೇಳಲಾಗಿದೆ. ಇದು ನೇಮಕಾತಿ ಪ್ರಕ್ರಿಯೆಯ ವಿಶ್ವಾಸಾರ್ಹತೆಗೆ ಧಕ್ಕೆ ತಂದಿದೆ ಎಂದು ಹೇಳಿದರು.

ವಿಳಂಬ: ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ನೀಡಲು ಹೋದರೂ, ಮಧ್ಯರಾತ್ರಿ 3ಗಂಟೆಗೆ ಪ್ರಕರಣ ದಾಖಲಿಸಲಾಗಿದೆ. ಸರಕಾರದ ಅನುಮತಿ ಪಡೆದು ಪ್ರಕರಣ ದಾಖಲಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದ ಅವರು, ಕೆಪಿಎಸ್‍ಸಿ ಅಕ್ರಮದ ಬಗ್ಗೆ ಉದ್ಯೋಗಾಕಾಂಕ್ಷಿಗಳ ಜತೆ ಚರ್ಚೆ ನಡೆಸಿದ್ದು, ಅವರ ಸಮಸ್ಯೆಗಳಿಗೆ ನ್ಯಾಯ ದೊರಕಿಸಲು ಬಿಜೆಪಿ ಬೆಂಬಲ ನೀಡಲಿದೆ ಎಂದರು.

ನಮ್ಮಿಂದಲೂ ತಪ್ಪಾಗಿದೆ: ನಮ್ಮ ಕಡೆಯಿಂದಲೂ ತಪ್ಪಾಗಿದೆ ಎಂಬುದನ್ನು ಒಪ್ಪಿಕೊಳ್ಳುತ್ತೇನೆ. ಯುವಕರು ಬೀದಿಗಿಳಿದು ಹೋರಾಟ ನಡೆಸುವ ವೇಳೆ ಇದನ್ನು ಇನ್ನಷ್ಟು ಗಂಭೀರವಾಗಿ ಪರಿಗಣಿಸಬೇಕಾಗಿತ್ತು. ವಿದ್ಯಾರ್ಥಿಗಳೊಂದಿಗೆ ಸುಮಾರು ಅರ್ಧಗಂಟೆ ಚರ್ಚೆ ನಡೆಸಿದ್ದು, ಮುಂದಿನ ದಿನಗಳಲ್ಲಿ ಈ ವಿಷಯಕ್ಕೆ ಹೆಚ್ಚಿನ ಗಮನ ಹರಿಸುತ್ತೇವೆ ಎಂದು ಹೇಳಿದರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News