ಮಳವಳ್ಳಿ: ಗಾರ್ಮೆಂಟ್ಸ್ ವಾಹನಗಳ ಸರಣಿ ಅಪಘಾತ; 60ಕ್ಕೂ ಹೆಚ್ಚು ಮಹಿಳೆಯರಿಗೆ ಗಾಯ
ಮಳವಳ್ಳಿ : ಗಾರ್ಮೆಂಟ್ಸ್ ಫ್ಯಾಕ್ಟರಿಗೆ ಮಹಿಳೆಯರನ್ನು ಕರೆದೊಯ್ಯುತ್ತಿದ್ದ ಎರಡು ಬಸ್ ಮತ್ತು ಒಂದು ಟೆಂಪೋ ನಡುವೆ ಸರಣಿ ಅಪಘಾತ ಸಂಭವಿಸಿ 60ಕ್ಕೂ ಹೆಚ್ಚು ಮಹಿಳೆಯರು ಗಾಯಗೊಂಡಿರುವ ಘಟನೆ ತಾಲೂಕಿನ ಮಳವಳ್ಳಿ-ಕನಕಪುರ ಹೆದ್ದಾರಿಯ ಡಿ.ಹಲಸಹಳ್ಳಿ ಗೇಟ್ ಬಳಿ ವರದಿಯಾಗಿದೆ.
ಶನಿವಾರ ಬೆಳಗ್ಗೆ 8:30ರ ಸುಮಾರಿಗೆ ತಾಲೂಕಿನ ಬಾಣಸಮುದ್ರ ಬಳಿಯ ಅಕ್ವೇರ ಗಾರ್ಮೆಂಟ್ಸ್ ಫ್ಯಾಕ್ಟರಿಗೆ ಯಳಂದೂರು, ಕೊಳ್ಳೇಗಾಲ, ಟಿ.ನರಸೀಪುರ ಭಾಗದಿಂದ ಮಹಿಳೆಯರನ್ನು ಕರೆದೊಯ್ಯುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ.
ಅಡ್ಡಾದಿಡ್ಡಿ ಬಂದ ಬೈಕ್ ಸವಾರನಿಗೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಲು ಮುಂದೆ ಹೋಗುತ್ತಿದ್ದ ಟೆಂಪೋ ಚಾಲಕ ಸಡನ್ ಬ್ರೇಕ್ ಹಾಕಿದ ಕಾರಣ ಹಿಂದಿನಿಂದ ಬರುತ್ತಿದ್ದ ಎರಡು ಬಸ್‌ಗಳು ಟೆಂಪೋಗೆ ಢಿಕ್ಕಿ ಹೊಡೆದಿವೆ. ಪರಿಣಾಮ ಮೂರು ವಾಹನಗಳು ಜಖಂಗೊಂಡಿವೆ.
ಅಪಘಾತದಲ್ಲಿ ಬಸ್ ಮತ್ತು ಟೆಂಪೋದಲ್ಲಿದ್ದ 60ಕ್ಕೂ ಹೆಚ್ಚು ಮಹಿಳಾ ಕಾರ್ಮಿಕರು ಗಾಯಗೊಂಡಿದ್ದಾರೆ. ಕೂಡಲೇ ಫ್ಯಾಕ್ಟರಿಯ ಇತರ ವಾಹನಗಳಲ್ಲಿ ಗಾಯಾಳುಗಳನ್ನು ಮಳವಳ್ಳಿ ಸರಕಾರಿ ಆಸ್ಪತ್ರೆಗೆ ಸಾಗಿಸಿ ಪ್ರಥಮ ಚಿಕಿತ್ಸೆ ನೀಡಲಾಯಿತು.
ಈ ಪೈಕಿ ತೀವ್ರವಾಗಿ ಗಾಯಗೊಂಡಿದ್ದ 17 ಮಹಿಳೆಯರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಉಳಿದವರಿಗೆ ಮಳವಳ್ಳಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.
ವಿಷಯ ತಿಳಿದ ತಕ್ಷಣ ಶಾಸಕ ಪಿ.ಎಂ.ನರೇಂದ್ರಸ್ವಾಮಿ, ಜಿಲ್ಲಾಧಿಕಾರಿ ಡಾ.ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿ.ಜೆ.ಶೋಭಾರಾಣಿ ಆಸ್ಪತ್ರೆಗೆ ಭೇಟಿ ನೀಡಿದರು. ವೈದ್ಯರಿಂದ ಮಾಹಿತಿ ಪಡೆದು ಗಾಯಾಳುಗಳ ಆರೋಗ್ಯ ವಿಚಾರಿಸಿ, ಸೂಕ್ತ ಚಿಕಿತ್ಸೆ ನೀಡುವಂತೆ ಸೂಚಿಸಿದರು.
ಮಾಹಿತಿ ತಿಳಿದು ಹಲಗೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.