ಕೆಪಿಎಸ್‍ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ವಿರುದ್ಧ ಎಫ್‍ಐಆರ್ ದಾಖಲು
ಬೆಂಗಳೂರು : ಸುಮಾರು 400 ಮಂದಿ ಪಶು ವೈದ್ಯಾಧಿಕಾರಿಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ ಆರೋಪ ಸಂಬಂಧ ಕೆಪಿಎಸ್‍ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ವಿರುದ್ಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.
ಸಂಬಂಧಿಕರಿಗೆ ಹಾಗೂ ಹಣ ನೀಡಿದವರಿಗೆ ಹುದ್ದೆ ನೀಡಲಾಗುತ್ತಿದೆ ಎಂದು ಆರೋಪಿಸಿ ಪಶು ವೈದ್ಯಾಧಿಕಾರಿ ಮಂಜುನಾಥ ಎಂಬುವರು ಶಿವಶಂಕರಪ್ಪ ವಿರುದ್ಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನ ಅನ್ವಯ ಶಿವಶಂಕರಪ್ಪ ಸಾಹುಕಾರ್, ಕೆಪಿಎಸ್‍ಸಿ ಸದಸ್ಯರು, ಕೆಲ ಅಭ್ಯರ್ಥಿಗಳ ಮೇಲೆ ಎಫ್‍ಐಆರ್ ದಾಖಲಾಗಿದೆ.
ಜನವರಿಯಲ್ಲಿ ನಡೆದಿದ್ದ ಪಶು ವೈದ್ಯಾಧಿಕಾರಿಗಳ ನೇಮಕಾತಿ ಪರೀಕ್ಷೆಯಲ್ಲಿ ಶಿವಶಂಕರಪ್ಪ ಸಂಬಂಧಿ ಸೇರಿ ಸುಮಾರು 29 ಅಭ್ಯರ್ಥಿಗಳು ಅಕ್ರಮವಾಗಿ ಉತ್ತೀರ್ಣರಾಗಿದ್ದಾರೆ. ಇಂತಹ ಕೆಲ ಅಭ್ಯರ್ಥಿಗಳಿಗೆ ಮಧ್ಯವರ್ತಿಗಳು ತರಬೇತಿ ನೀಡಿದ್ದಾರೆ. ಕೆಲವರಿಗೆ ಓಎಂಆರ್ ಶೀಟ್ ತಿದ್ದುಪಡಿ ಮಾಡಿ ಅಕ್ರಮ ನಡೆಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.