ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆ ನೀಡಿರುವುದು ಒಳ್ಳೆಯ ಬೆಳವಣಿಗೆ : ಜಿ.ಪರಮೇಶ್ವರ್‌

► "ತಪ್ಪಿತಸ್ಥರ ವಿರುದ್ಧ ಕ್ರಮ ಎಂದ ಮೋದಿಯವರ ಭರವಸೆ ನಿಜವಾಗುವುದೇ ಕಾದು ನೋಡಬೇಕು" ► "ಶೀಘ್ರವೇ ಮೈಸೂರಿನಲ್ಲಿ ಬರ ಪರಿಸ್ಥಿತಿ ಪರಿಶೀಲನಾ ಸಭೆ"

Update: 2026-07-26 15:16 IST

ತುಮಕೂರು : ನಾಳೆ ದೆಹಲಿಯಲ್ಲಿ ರಾಜ್ಯದ ಎಲ್ಲ ಸಂಸದರ ಸಭೆಯನ್ನು ಕರೆದಿದ್ದೇವೆ. ಬರ ಪರಿಸ್ಥಿತಿಯ ನಿರ್ವಹಣೆಗೆ ಸಹಕಾರವನ್ನು ನೀಡುವಂತೆ ಕೋರಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವಂತೆ ಅವರಲ್ಲಿ ಮನವಿ ಮಾಡಿಕೊಳ್ಳುತ್ತೇವೆ ಎಂದು ಉಪ ಮುಖ್ಯಮಂತ್ರಿಗಳು ಹಾಗೂ ಕಂದಾಯ ಮತ್ತು ಕ್ರೀಡಾ ಸಚಿವರಾದ ಡಾ. ಜಿ. ಪರಮೇಶ್ವರ್‌ ಅವರು ತಿಳಿಸಿದರು.

ಇಂದು ತುಮಕೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರಕ್ಕೆ ಮುಂದಿನ ತಿಂಗಳು ರಾಜ್ಯದ ಬರ ಪರಿಸ್ಥಿತಿಯ ಸಂಪೂರ್ಣ ಮಾಹಿತಿಯೊಂದಿಗಿನ ಮನವಿಯನ್ನು ಸಲ್ಲಿಸುತ್ತೇವೆ. ಪ್ರಸ್ತುತ ಸ್ಥಿತಿಯಲ್ಲಿ ಎಷ್ಟು ಪರಿಹಾರ ಬೇಕು ಎಂಬುದನ್ನು ಅಂದಾಜಿಸಲು ಆಗುವುದಿಲ್ಲ ಎಂದರು.

ಈಗಾಗಲೇ ನಾನು ಮತ್ತು ಮುಖ್ಯಮಂತ್ರಿಗಳು ಮೂರು ವಿಭಾಗಗಳನ್ನು ವೀಕ್ಷಣೆ ಮಾಡಿ, ಬರದ ಪರಿಸ್ಥಿತಿಯ ಪರಿಶೀಲನೆ ನಡೆಸಿದ್ದೇವೆ. ಶೀಘ್ರವೇ ಮೈಸೂರು ವಿಭಾಗದಲ್ಲೂ ಪರಿಶೀಲನಾ ಸಭೆಯನ್ನು ಮಾಡುತ್ತೇವೆ. ಚಿತ್ರದುರ್ಗದ ಪರಿಶೀಲನಾ ಸಭೆಯನ್ನು ನಿನ್ನೆ ಮಾಡಿದ್ದೇವೆ. ಬರ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ಖುದ್ದು ಪರಿಶೀಲನೆ ನಡೆಸಿದ್ದೇವೆ. ಸೂರ್ಯಕಾಂತಿ ಬೆಳೆಗಳು ಒಣಗಿ ಹೋಗಿವೆ. ಅದನ್ನು ವೀಕ್ಷಣೆ ಮಾಡಿ, ರೈತರಿಂದ ಮಾಹಿತಿ ಪಡೆದುಕೊಂಡಿದ್ದೇವೆ. ಮುಂದೆ ಮಾಡಬೇಕಿರುವ ಕಾರ್ಯಕ್ರಮಗಳ ಬಗ್ಗೆ ಚರ್ಚೆ ಮಾಡುತ್ತೇವೆ ಎಂದು ಹೇಳಿದರು.

ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಬಗ್ಗೆ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ ಅವರು, ಲಕ್ಷಾಂತರ ಜನರ ಭವಿಷ್ಯದ ಜೊತೆ ಆಟ ಆಡುವಂತಹದ್ದು ಸರಿಯಲ್ಲ. ಧರ್ಮೇಂದ್ರ ಪ್ರಧಾನ್ ಗೆ ಮಾತ್ರವಲ್ಲ, ಆ ಅರ್ಹತೆ ಯಾರಿಗೂ ಇಲ್ಲ. ಯುವಕರ ಭವಿಷ್ಯಕ್ಕೆ ಅನುಕೂಲ ಮಾಡಿಕೊಡಬೇಕೆ ವಿನಃ ಭವಿಷ್ಯಕ್ಕೆ ಅಡ್ಡ ಬರಬಾರದು ಎಂದರು.

ನೀಟ್ ಪರೀಕ್ಷೆ ಬಹಳ ದೊಡ್ಡದು. ಲಕ್ಷಾಂತರ ಮಕ್ಕಳು ಅವರ ಭವಿಷ್ಯವನ್ನು ನಿರ್ಮಾಣ ಮಾಡಿಕೊಳ್ಳಲು ಬರೆಯುವ ಪರೀಕ್ಷೆ ಇದು. ಅದರಲ್ಲಿ ಯಾವುದೇ ತಪ್ಪುಗಳು ಆಗಬಾರದು. ಜವಾಬ್ದಾರಿಯನ್ನು ಹೊತ್ತಿರುವವರು ಅದನ್ನು ನೋಡಿಕೊಳ್ಳಬೇಕು. ಹೆಜ್ಜೆ ಹೆಜ್ಜೆಗೂ ಪರಿಶೀಲನೆ ಮಾಡಿ, ಪರೀಕ್ಷೆ ಚೆನ್ನಾಗಿ ಆಗುವಂತೆ ನೋಡಿಕೊಂಡು, ಆ ಮಕ್ಕಳಿಗೆ ಹೆಚ್ಚಿನ ಅಂಕಗಳು ಬರುವ ರೀತಿಯಲ್ಲಿ ಅವರಿಗೆ ಅವಕಾಶಗಳನ್ನು ಕಲ್ಪಿಸಬೇಕು ಎಂದು ಹೇಳಿದರು.

ಹೀಗಿರುವಾಗ ಯಾರು ತಪ್ಪು ಮಾಡುತ್ತಾರೋ, ಅದು ಸಣ್ಣ ತಪ್ಪಲ್ಲ. ದೆಹಲಿಯಲ್ಲಿ ಯುವಕರು ಪ್ರತಿಭಟನೆ ಮಾಡಿ, ಯಾರು ತಪ್ಪಿತಸ್ಥರಿದ್ದಾರೆ ಅವರಿಗೆ ಶಿಕ್ಷೆ ಆಗಬೇಕು ಮತ್ತು ಅವರನ್ನು ಆ ಜವಾಬ್ದಾರಿಯಿಂದ ತೆಗೆಯಬೇಕು ಎಂದು ಹೋರಾಟ ಮಾಡಿದ್ದರು. ಧರ್ಮೇಂದ್ರ ಪ್ರಧಾನ್ ಅವರು ಜವಾಬ್ದಾರಿ ವಹಿಸಿಕೊಂಡಿದ್ದರು. ಹಾಗಾಗಿ ಅವರು ರಾಜೀನಾಮೆ ನೀಡಬೇಕು ಮತ್ತು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು ಎಂಬ ಬೇಡಿಕೆಯನ್ನು.ಇಟ್ಟಿದ್ದರು. ರಾಹುಲ್ ಗಾಂಧಿ ಅವರು ಕೂಡ ಆ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಯುವಕರೇ ನಮ್ಮ ದೇಶದ ಭವಿಷ್ಯ. ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆ ನೀಡಿ ಒಳ್ಳೆಯ ಕೆಲಸವನ್ನು ಮಾಡಿದ್ದಾರೆ ಎಂದರು.

ಮುಂದುವರೆದು, ಧರ್ಮೇಂದ್ರ ಪ್ರಧಾನ್ ಅವರು ಮೊದಲೇ ರಾಜೀನಾಮೆ ಕೊಡಬೇಕಿತ್ತು. ರಾಜೀನಾಮೆ ಕೊಟ್ಟಿರುವುದು ಒಳ್ಳೆಯ ಬೆಳವಣಿಗೆ ಮತ್ತು ಪ್ರಧಾನಮಂತ್ರಿಗಳು ಇನ್ನು ಹೆಚ್ಚಿನ ರೀತಿಯಲ್ಲಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ. ಕಾದು ನೋಡೋಣ ಎಂದು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News