ದೌರ್ಜನ್ಯವಿಲ್ಲದೆ ಸುಸೂತ್ರವಾಗಿ ಪ್ರತಿಭಟನೆ: ಕರ್ನಾಟಕ ನೋಡಿ ಅಮಿತ್ ಶಾ ಕಲಿಯಲಿ: ಪ್ರಿಯಾಂಕ್ ಖರ್ಗೆ
ಬೆಂಗಳೂರು : ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಸಂಬಂಧ ಬೆಂಗಳೂರು ಸೇರಿದಂತೆ ರಾಜ್ಯದ ನಾನಾ ಕಡೆ ಪೊಲೀಸರ ದೌರ್ಜನ್ಯವಿಲ್ಲದೆ ಸುಸೂತ್ರವಾಗಿ ಪ್ರತಿಭಟನೆಗೆ ಅವಕಾಶ ಕಲ್ಪಿಸಲಾಗಿದೆ. ಇದನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ನೋಡಿ ಕಲಿಯಬೇಕು ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ಹಲವು ದಿನಗಳಿಂದ ವಿದ್ಯಾರ್ಥಿಗಳು ನೀಟ್ ವಿರುದ್ಧ ಪ್ರತಿಭಟನೆ ನಡೆಸಿದರು. ಆದರೆ, ಗೃಹ ಇಲಾಖೆಯಿಂದ ಪ್ರತಿಭಟನಾಕಾರರಿಗೆ ಸಂಪೂರ್ಣ ಸಹಕಾರ ನೀಡಲಾಯಿತು. ಯಾವುದೇ ದಬ್ಬಾಳಿಕೆ ಅಥವಾ ದೌರ್ಜನ್ಯವಿಲ್ಲದೆ ಅತ್ಯಂತ ಶಿಸ್ತಿನಿಂದ ಪ್ರತಿಭಟನೆ ನಡೆಯಿತು. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬೆಂಗಳೂರಿನ ಪ್ರತಿಭಟನೆಯ ರೀಲ್ಸ್ ಕಳುಹಿಸಿಕೊಡಿ. ಗೃಹ ಇಲಾಖೆಯನ್ನು ದೌರ್ಜನ್ಯವಿಲ್ಲದೆ ಹೇಗೆ ಸುಸೂತ್ರವಾಗಿ ನಡೆಸಬೇಕೆಂದು ಅಮಿತ್ ಶಾ ಅವರು ಕರ್ನಾಟಕವನ್ನು ನೋಡಿ ಕಲಿಯಲಿ ಎಂದು ತಿಳಖಿಸಿದರು.
"ವಿಕಸಿತ ಭಾರತ" ಮಾಡಬೇಕಾದರೆ ದೇಶದ ಯುವಕರನ್ನು ದೂರವಿಡಲು ಸಾಧ್ಯವಿಲ್ಲ ಎಂದ ಅವರು, ವಿರೋಧ ಪಕ್ಷಗಳ ನಾಯಕರನ್ನು ದೇಶದ್ರೋಹಿಗಳು ಎಂದು ಕರೆಯಲು ಬಿಜೆಪಿಗರಿಗೆ ಯಾರು ಗುತ್ತಿಗೆ ಕೊಟ್ಟಿದ್ದಾರೆ?. ಆರೆಸ್ಸೆಸ್ ಕಚೇರಿಯ ಮೇಲೆ ರಾಷ್ಟ್ರಧ್ವಜ ಹಾರಿಸಲು 52 ವರ್ಷಗಳು ಬೇಕಾಯಿತು. ಇವರಿಂದ ನಾವು ದೇಶಭಕ್ತಿಯ ಪಾಠ ಕಲಿಯಬೇಕಿಲ್ಲ. ರಾಷ್ಟ್ರಪಿತ ಗಾಂಧಿಜಿಯನ್ನು ಕೊಂದ ಗೋಡ್ಸೆಯನ್ನು ಪೂಜಿಸುವವರು ದೇಶಭಕ್ತರಾದರೆ, ಗಾಂಧೀಜಿ ಯಾರು? ಅವರ ಕಚೇರಿಗಳಲ್ಲಿ ಯಾರ ಫೋಟೋಗಳಿವೆ ಎಂಬುದು ಎಲ್ಲರಿಗೂ ತಿಳಿದಿದೆ ಎಂದು ಅವರು ಟೀಕಿಸಿದರು.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಅನ್ನಭಾಗ್ಯದ ಅಕ್ಕಿಯನ್ನು ಕಾಳಸಂತೆಯಲ್ಲಿ ಕಳವು ಮಾಡಿ ವಿದೇಶಕ್ಕೆ ಅಕ್ರಮವಾಗಿ ಸಾಗಿಸುತ್ತಿರುವ ಜಾಲದ ಹಿಂದೆ ಬಿಜೆಪಿ ನಾಯಕರೇ ಇದ್ದಾರೆ ಎಂದು ಆರೋಪಿಸಿದ ಅವರು, ಅಕ್ಕಿ ಕಳ್ಳತನ ಮಾಡುವವರಿಗೆ ಬಿಜೆಪಿ ಟಿಕೆಟ್ ನೀಡುತ್ತದೆ. ಈ ಪ್ರಕರಣಗಳಲ್ಲಿ ಬಿಜೆಪಿ ನಾಯಕರೇ ಪ್ರಮುಖ ಆರೋಪಿಗಳಾಗಿದ್ದು, ಚಾರ್ಜ್‍ಶೀಟ್ ಕೂಡ ಆಗಿದೆ. ಈ ವಿಚಾರವಾಗಿ ನಾನು ದಾಖಲೆ ಇಲ್ಲದೆ ಮಾತನಾಡುವುದಿಲ್ಲ. ಇದನ್ನು ತಡೆಯಲು ಹೊಸ ಕಾನೂನು ಜಾರಿಗೆ ಆಹಾರ ಸಚಿವ ಮುನಿಯಪ್ಪ ಅವರಿಗೆ ಮನವಿ ಮಾಡಿದ್ದೇನೆ. ಶೀಘ್ರದಲ್ಲಿಯೇ ಕಠಿಣ ಕ್ರಮ ಕೈಗೊಳ್ಳುವ ಸುದ್ದಿ ಮುಟ್ಟಲಿದೆ ಎಂದು ಹೇಳಿದರು.