ಆರೆಸ್ಸೆಸ್ ಗೀತೆಯಿಂದ ನೋವಾಗಿದ್ದರೆ ಕ್ಷಮೆ ಕೋರುವೆ : ಡಿ.ಕೆ.ಶಿವಕುಮಾರ್
ಬೆಂಗಳೂರು, ಆ.26 : ಆರೆಸ್ಸೆಸ್ ಗೀತೆ ಹೇಳಿ ಯಾರ ಮನಸ್ಸನ್ನು ನೋಯಿಸುವ ಉದ್ದೇಶ ನನ್ನದಲ್ಲ. ಆದರೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಇಂಡಿಯಾ ಮೈತ್ರಿ ಕೂಟದ ನಾಯಕರಿಗೆ ನೋವಾಗಿದ್ದರೆ ಕ್ಷಮೆ ಕೋರುತ್ತೇನೆ ಎಂದು ಡಿ.ಕೆ.ಶಿವಕುಮಾರ್ ವಿವಾದಕ್ಕೆ ತೆರೆ ಎಳೆದಿದ್ದಾರೆ.
ವಿಧಾನಸಭೆ ಕಲಾಪದಲ್ಲಿ ಆರೆಸ್ಸೆಸ್ ಗೀತೆಯ ಸಾಲುಗಳನ್ನು ಹಾಡಿದ್ದ ಕುರಿತು ಮಂಗಳವಾರ ವಿಧಾನಸೌಧದಲ್ಲಿ ಮಾಧ್ಯಮಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನನ್ನ ಇತಿಹಾಸ, ನನ್ನ ಬದ್ಧತೆ, ನನ್ನ ಸಿದ್ಧಾಂತದ ಬಗ್ಗೆ ಗೊತ್ತಿಲ್ಲದೆ ರಾಜಕೀಯ ಮಾಡಿದರೆ, ಅದು ಅವರ ಇಚ್ಛೆ. ಆದರೆ, ಆರೆಸ್ಸೆಸ್ ಗೀತೆ ಕುರಿತು ನಾನು ಇಂಡಿಯಾ ಮೈತ್ರಿಕೂಟದ ನಾಯಕರಿಗೆ ಕ್ಷಮೆ ಕೋರುತ್ತೇನೆಯೇ ವಿನಃ ರಾಜಕೀಯ ಮಾಡುವವರಿಗೆ ಹೆದರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ನನ್ನನ್ನು ಬೆದರಿಸಿ ಕ್ಷಮೆ ಕೇಳಿಸಲಾಗಿದೆ ಎಂಬ ಭಾವನೆ ಬೇಡ. ಬೆದರಿಕೆಗಳಿಗೆ ಹೆದರುವ ರಕ್ತ ನನ್ನದಲ್ಲ. ಕುಮಾರಸ್ವಾಮಿ ಸಿಎಂ ಆಗಿದ್ದಾಗ ನಡೆದ ಸಾತನೂರು ಘಟನೆ, ಬೇರೆ ಬೇರೆ ಘಟನೆಗಳು, ಸದನದಲ್ಲಿ ನಡೆದ ಘಟನೆಗಳು, ಆಪರೇಷನ್ ಕಮಲ ಆದಾಗ ಏನಾಯಿತು? ಯಾರು, ಯಾರು ಯಾವ ಮೂಲದಿಂದ ನಮ್ಮ ಪಕ್ಷಕ್ಕೆ ಬಂದಿದ್ದಾರೆ, ಬೇರೆ ಪಕ್ಷಕ್ಕೆ ಹೇಗಿದ್ದಾರೆ ಎಂಬುದು ಗೊತ್ತಿರಬೇಕು ಎಂದು ತಿರುಗೇಟು ನೀಡಿದರು.
ಸದನದಲ್ಲಿ ಚಿನ್ನಸ್ವಾಮಿ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದ ಚರ್ಚೆ ವೇಳೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರನ್ನು ಸಮರ್ಥಿಸಿಕೊಳ್ಳುತ್ತಾ, ನಾನು ಅವರ ಗರಡಿಯಲ್ಲಿ ಬೆಳೆದಿದ್ದೇನೆ ಎಂದು ಹೇಳಿದೆ. ಕೆಣಕಿದ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರ ಕಾಲೆಳೆಯಲು ಅವರು ಬೆಳೆದು ಬಂದಿರುವ ಹಿನ್ನೆಲೆಯೂ ನನಗೆ ಗೊತ್ತಿದೆ ಎಂದು ಆರೆಸ್ಸೆಸ್ ಗೀತೆಯ ಎರಡು ಸಾಲು ಹೇಳಿದೆ.ಇದರಲ್ಲಿ ಹೊಗಳುವುದು ನನ್ನ ಉದ್ದೇಶವಾಗಿರಲಿಲ್ಲ. ಆದರೆ ನಿರ್ದಿಷ್ಟ ಭಾಗವನ್ನು ಉಲ್ಲೇಖಿಸಿ ರಾಷ್ಟ್ರ ಮಟ್ಟದ ಸುದ್ದಿ ಮಾಡಲಾಗಿದೆ ಎಂದು ಅವರು ಹೇಳಿದರು.
1979 ರಿಂದ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡು ವಿದ್ಯಾರ್ಥಿ ನಾಯಕನಾಗಿ ಕೆಲಸ ಮಾಡಿಕೊಂಡು ಬಂದವನು. ನಾನು ಹೊಸದಾಗಿ ಪಕ್ಷ ಸೇರಿದವನಲ್ಲ. ಯಾರಿಂದಲೂ ಪಾಠ ಹೇಳಿಸಿಕೊಳ್ಳುವ ಅವಶ್ಯಕತೆಯೂ ಇಲ್ಲ. ಇಂದಿರಾ ಗಾಂಧಿ ಅವರು ನಿಧನ ಹೊಂದಿದ ಸಂದರ್ಭದಲ್ಲಿ ನನ್ನ ಟೂರಿಂಗ್ ಟಾಕೀಸ್‍ಗೆ ಇಂದಿರಾ ಚಿತ್ರಮಂದಿರ ಎಂದು ಹೆಸರಿಟ್ಟವನು ನಾನು. ನನ್ನ ಹಾಗೂ ಗಾಂಧಿ ಕುಟುಂಬದ ನಡುವಿನ ಸಂಬಂಧ ಭಕ್ತ ಹಾಗೂ ಭಗವಂತನ ನಡುವಣ ಸಂಬಂಧ ಎಂದು ಶಿವಕುಮಾರ್ ನುಡಿದರು.
ಕಾಂಗ್ರೆಸ್ ಪಕ್ಷದ ಇತಿಹಾಸ, ಆರೆಸ್ಸೆಸ್ ಇತಿಹಾಸ, ಬಿಜೆಪಿ ಇತಿಹಾಸ, ಜೆಡಿಎಸ್, ಕಮ್ಯುನಿಷ್ಟ್ ಪಕ್ಷಗಳ ಇತಿಹಾಸ, ಸಿದ್ದಾಂತ ತಿಳಿದಿದ್ದೇನೆ. ಇದು ನನ್ನ ಕರ್ತವ್ಯ. ಕೇರಳದಲ್ಲಿ ನಮ್ಮ ಮೈತ್ರಿ ಪಕ್ಷ ಮುಸ್ಲಿಂ ಲೀಗ್ ಯುವ ಸಂವಾದಕ್ಕೂ ಕೆಲ ವರ್ಷಗಳ ಹಿಂದೆ ಹೋಗಿದ್ದೆ. ಆಗ ಅವರ ಶಿಸ್ತು, ಸಂಘಟನೆ ನೋಡಿ ನಾನು ಬೆರಗಾಗಿದ್ದೆ ಎಂದು ಅವರು ಹೇಳಿದರು.
ನಾನು ವಿರೋಧ ಪಕ್ಷಗಳ ಕಾಲೆಳೆಯಲು ಈ ಸಾಲುಗಳನ್ನು ಪ್ರಸ್ತಾಪಿಸಿದ್ದೇನೆ. ನನ್ನ ಕೆಲವು ಸ್ನೇಹಿತರು ಇದರಲ್ಲಿ ರಾಜಕೀಯ ಮಾಡಿ, ಸಾರ್ವಜನಿಕರಲ್ಲಿ ಗೊಂದಲ ಮೂಡಿಸಲು ಹೊರಟಿದ್ದಾರೆ. ನಾನು ಹುಟ್ಟು ಕಾಂಗ್ರೆಸ್ಸಿಗ ಎಂಬ ಹೇಳಿಕೆಗೆ ನಾನು ಬದ್ಧ. ಪಕ್ಷ ಹಾಗೂ ಗಾಂಧಿ ಕುಟುಂಬಕ್ಕೆ ಇರುವ ನನ್ನ ನಿಷ್ಠೆಯನ್ನು ಯಾರೂ ಪ್ರಶ್ನೆ ಮಾಡುವಂತಿಲ್ಲ. ಪ್ರಶ್ನೆ ಮಾಡುವವರು ಮೂರ್ಖರು ಎಂದು ಅವರು ವಾಗ್ದಾಳಿ ನಡೆಸಿದರು.
ರಾಜ್ಯ ರಾಜಕೀಯ ಇತಿಹಾಸದಲ್ಲಿ ನಾನು ಮಾಡಿರುವ ಹೋರಾಟವನ್ನು ಬೇರೆ ಯಾರೂ ಮಾಡಿಲ್ಲ. ಹೋರಾಟದಲ್ಲಿ ಅವರು ನನ್ನ ಸಮೀಪಕ್ಕೂ ಬರಲು ಸಾಧ್ಯವಿಲ್ಲ. ನಾನು ಈ ಮಾತನ್ನು ನನ್ನ ಸಮಕಾಲೀನರನ್ನು ಉದ್ದೇಶಿಸಿ ಮಾತನಾಡುತ್ತಿದ್ದೇನೆ. ಹಿರಿಯ ನಾಯಕರ ಜೊತೆ ಹೋಲಿಕೆ ಮಾಡಿಕೊಳ್ಳುತ್ತಿಲ್ಲ ಎಂದು ಅವರು ಹೇಳಿದರು.
ನನ್ನ ಬಂಧನವಾದಾಗ, ಅನೇಕರು ಸಂತೋಷ ಪಟ್ಟರು. ಡಿ.ಕೆ.ಶಿವಕುಮಾರ್ ರಾಜಕಾರಣ ಮುಗಿದು ಹೋಯಿತು ಎಂದು ಭಾವಿಸಿದರು. ಆದರೆ, ಕಾಂಗ್ರೆ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಅವರು ಚರ್ಚೆ ಮಾಡಿ ನನಗೆ ಕೆಪಿಸಿಸಿ ಅಧ್ಯಕ್ಷಗಿರಿಯ ಜವಾಬ್ದಾರಿ ನೀಡಿದರು. ಅಂದಿನಿಂದ ಇಂದಿನವರೆಗೂ ಒಂದು ದಿನವೂ ಸರಿಯಾಗಿ ನಿದ್ದೆ ಮಾಡಿಲ್ಲ. ಸೋಮವಾರ ರಾತ್ರಿ ಕೂಡ ನಗರ ಪ್ರದಕ್ಷಿಣೆ ಮುಗಿಸಿ ಮಲಗಿದಾಗ 3 ಗಂಟೆ ಎಂದು ತಿಳಿಸಿದರು.
ನನ್ನ ಈ ಹೇಳಿಕೆಯಲ್ಲಿ ರಾಜಕಾರಣ ಮಾಡಬಹುದು, ಕೆಸರೆರಚಾಟ ಮಾಡಬಹುದು ಎಂದು ಭಾವಿಸಿದ್ದರೆ ಅದು ಸುಳ್ಳು ಎಂದ ಅವರು, ನಾನು ನನ್ನ ಕರ್ತವ್ಯ ಮಾಡುತ್ತಿದ್ದೇನೆ. ಮಾಧ್ಯಮಗಳು ನನ್ನನ್ನು ಬೆಳೆಸಿದ್ದು, ನೀವು ನನ್ನನ್ನು ಟೀಕೆ ಮಾಡಿದಾಗಲೂ ನಾನು ಅವುಗಳನ್ನು ಸ್ವಾಗತಿಸಿದ್ದೇನೆ. ನೀವು ಮಾರ್ಗದರ್ಶನ ನೀಡಿ ನನ್ನನ್ನು ತಿದ್ದಿದ್ದೀರಿ. ಬೇರೆಯವರು ಹೇಳಿದ್ದನ್ನೂ ನೀವು ಪ್ರಸಾರ ಮಾಡುತ್ತೀರಿ. ಆದರೂ ನಾನು ಮಾಧ್ಯಮಗಳನ್ನು ನನ್ನ ಹಿತೈಷಿಗಳು, ಮಾರ್ಗದರ್ಶಕರು ಎಂದು ಭಾವಿಸಿದ್ದೇನೆ ಎಂದು ಅವರು ಹೇಳಿದರು.