ವಿಶೇಷ ವಿವಾಹ ಕಾಯ್ದೆಯಡಿ 2ನೇ ಮದುವೆಯಾದರೆ ಮುಸ್ಲಿಮ್ ಪುರುಷನಿಗೂ ಬಹುಪತ್ನಿತ್ವಕ್ಕೆ ಅವಕಾಶವಿಲ್ಲ : ಹೈಕೋರ್ಟ್
ಧಾರವಾಡ : ಮುಸ್ಲಿಮ್ ವೈಯಕ್ತಿಕ ಕಾನೂನು ಪುರುಷನಿಗೆ ಬಹುಪತ್ನಿತ್ವಕ್ಕೆ ಅವಕಾಶ ನೀಡಿದರೂ, ವಿಶೇಷ ವಿವಾಹ ಕಾಯ್ದೆ (1954) ಅಡಿಯಲ್ಲಿ ನೋಂದಾಯಿಸಿಕೊಳ್ಳುವ ಎರಡನೇ ಮದುವೆ ಕಾನೂನುಬದ್ಧವಾಗುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠ ತೀರ್ಪು ನೀಡಿದೆ.
ಮೊದಲ ಪತ್ನಿ ಇರುವಾಗ ವಿಶೇಷ ವಿವಾಹ ಕಾಯ್ದೆ (1954)ಯಡಿ ಮಾಡಿಕೊಳ್ಳುವ ಯಾವುದೇ ಎರಡನೇ ವಿವಾಹ ಸಂಪೂರ್ಣ ಅನೂರ್ಜಿತ ಎಂದು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರಿದ್ದ ಏಕಸದಸ್ಯ ಪೀಠ ಸ್ಪಷ್ಟಪಡಿಸಿದೆ.
ಪ್ರಕರಣವೊಂದರಲ್ಲಿ, ಮುಸ್ಲಿಮ್ ವ್ಯಕ್ತಿಯೊಬ್ಬರು ಮೊದಲ ಪತ್ನಿ ಜೊತೆಗಿದ್ದಾಗಲೇ 2008ರಲ್ಲಿ ವಿಶೇಷ ವಿವಾಹ ಕಾಯ್ದೆಯಡಿ ಎರಡನೇ ಮದುವೆ ಯಾಗಿದ್ದರು. 2024 ರಲ್ಲಿ ವ್ಯಕ್ತಿ ನಿಧನರಾದಾಗ, ಕುಟುಂಬದ ಆಸ್ತಿ ಹಂಚಿಕೆ ದಾವೆಯಲ್ಲಿ ಎರಡನೇ ಪತ್ನಿ ಹಾಗೂ ಮಗಳು ಕಾನೂನುಬದ್ಧ ಉತ್ತರಾಧಿಕಾರಿಗಳೆಂದು ಸೇರ್ಪಡೆಯಾಗಲು ಅರ್ಜಿ ಸಲ್ಲಿಸಿದ್ದರು. ವಿಚಾರಣಾ ನ್ಯಾಯಾಲಯವು ಎರಡನೇ ಪತ್ನಿಗೆ ಕಾನೂನುಬದ್ಧ ಪತ್ನಿಯ ಸ್ಥಾನಮಾನ ನಿರಾಕರಿಸಿ, ಮಗಳಿಗೆ ಮಾತ್ರ ಆಸ್ತಿಯಲ್ಲಿ ಭಾಗವಹಿಸಲು ಅನುಮತಿ ನೀಡಿತ್ತು.
ಈ ನಿರ್ಧಾರವನ್ನು ಎತ್ತಿಹಿಡಿದ ಹೈಕೋರ್ಟ್, ಧಾರ್ಮಿಕ ಪದ್ಧತಿಯಂತೆ ಮದುವೆಯಾದಾಗ ಮಾತ್ರ ವೈಯಕ್ತಿಕ ಕಾನೂನು ಅನ್ವಯಿಸುತ್ತದೆ ಎಂದು ವಿಶ್ಲೇಷಿಸಿದೆ. ಪಕ್ಷಕಾರರು ಸ್ವಇಚ್ಛೆಯಿಂದ ವಿಶೇಷ ವಿವಾಹ ಕಾಯ್ದೆಯನ್ನು ಆಯ್ಕೆ ಮಾಡಿಕೊಂಡಾಗ, ಜಾತ್ಯತೀತ ಶಾಸನಬದ್ಧ ನಿಯಮಗಳಿಗೆ ಬದ್ಧರಾಗಬೇಕಾಗುತ್ತದೆ.
ಕಾಯ್ದೆಯ ಸೆಕ್ಷನ್ 4(ಎ) ಪ್ರಕಾರ ಮೊದಲ ವಿವಾಹ ರದ್ದಾಗದೆ ಮತ್ತೊಂದು ಮದುವೆಯಾಗಲು ಅವಕಾಶವಿಲ್ಲ. ಹೀಗಾಗಿ ಎರಡನೇ ಪತ್ನಿಗೆ ಕಾನೂನುಬದ್ಧ ಸ್ಥಾನಮಾನ ಸಿಗುವುದಿಲ್ಲ. ಆದರೆ, ಕಾನೂನಿನ ಅಡಿಯಲ್ಲಿ ಅಮಾನ್ಯ ವಿವಾಹದಿಂದ ಜನಿಸಿದ ಮಕ್ಕಳಿಗೆ ಶಾಸನಬದ್ಧ ರಕ್ಷಣೆ ಇರುವುದರಿಂದ, ಮಗಳಿಗೆ ತಂದೆಯ ಆಸ್ತಿಯಲ್ಲಿ ಹಕ್ಕು ಸಿಗಲಿದೆ ಎಂದು ನ್ಯಾಯಾಲಯ ತೀರ್ಪಿನಲ್ಲಿ ಉಲ್ಲೇಖಿಸಿದೆ.