ಕೆಎಸ್ಸಾರ್ಟಿಸಿ ಘಟಕಕ್ಕೆ ಇಂಧನ ಪೂರೈಕೆ : ತಮಿಳುನಾಡಿನ ಟ್ಯಾಂಕರ್‌ನಲ್ಲಿ ಅವ್ಯವಹಾರ ಆರೋಪ
ಬೆಂಗಳೂರು : ಕೆಎಸ್ಸಾರ್ಟಿಸಿಯ ಪಾಂಡವಪುರ ಘಟಕಕ್ಕೆ ಇಂಧನವನ್ನು ಪೂರೈಕೆ ಮಾಡಿದ ತಮಿಳುನಾಡಿನ ಟ್ಯಾಂಕರ್‌ನಲ್ಲಿ ಅವ್ಯವಹಾರ ಕಂಡು ಬಂದಿದ್ದು, ಕಾನೂನು ಮಾಪನಶಾಸ್ತ್ರ ಇಲಾಖೆಯ ಅಧಿಕಾರಿಗಳು ಟ್ಯಾಂಕರ್ ಮಾಲಕರು, ಚಾಲಕರು ಮತ್ತು ಕ್ಲೀನರ್ ಮೇಲೆ ಕಾನೂನು ಕ್ರಮ ಜರುಗಿಸಲು ಪಾಂಡವಪುರದ ಸಿವಿಲ್ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.
ಕೆಎಸ್ಸಾರ್ಟಿಸಿಯ ಪಾಂಡವಪುರ ಘಟಕಕ್ಕೆ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್, ಹಾಸನ ಟರ್ಮಿನಲ್ ನಿಂದ 20 ಸಾವಿರ ಲೀಟರ್ ಇಂಧನ ಸರಬರಾಜು ಮಾಡಲು ಬಂದಿದ್ದಂತಹ ಟಿನ್‌ಎನ್-02 ಬಿಎಚ್-3039 ಟ್ಯಾಂಕರ್‌ನಿಂದ ಇಂಧನವನ್ನು ಪಡೆಯುವ ಮುನ್ನ ಘಟಕದ ಡಿಕ್ಯಾಂಟಿಂಗ್ ತಂಡದ ಸದಸ್ಯರು ತಪಾಸಣೆ ಮಾಡಿದರು.
ಟ್ಯಾಂಕರ್‌ನ 4ನೇ ಕಂಪಾರ್ಟ್‌ಮೆಂಟ್‌ನಲ್ಲಿ ಸುಮಾರು 130 ಲೀಟರ್ ಕಡಿಮೆ ಇಂಧನ ಇರುವುದನ್ನು ಗಮನಿಸಿ, ಟ್ಯಾಂಕರ್‌ಅನ್ನು ಕೂಲಂಕುಷವಾಗಿ ಪರಿಶೀಲಿಸಿದರು. 4ನೇ ಕಂಪಾರ್ಟ್‌ಮೆಂಟ್‌ನಲ್ಲಿ ಡೆಲಿವರಿ ಪೈಪ್‌ನ ಒಳಗಿನಿಂದ ಕಾನೂನುಬಾಹಿರವಾಗಿ ಬೇರೊಂದು ಪ್ಲೆಕ್ಸಿಬಲ್ ಪೈಪನ್ನು ಅಳವಡಿಸಿ, ಅದರಿಂದ ನೇರವಾಗಿ ಇಂಧನ ಟ್ಯಾಂಕರ್ ಡೀಸೆಲ್ ಟ್ಯಾಂಕ್‌ಗೆ ಡೀಸೆಲ್ ಅನ್ನು ಭರ್ತಿಮಾಡಿಕೊಳ್ಳುವ ವ್ಯವಸ್ಥೆ ಮಾಡಿಕೊಂಡಿರುವುದು ಕಂಡುಬಂದಿದೆ.
ಈ ಸಂಬಂಧ ಘಟಕ ವ್ಯವಸ್ಥಾಪಕರು ಕಾನೂನು ಮಾಪನಶಾಸ್ತ್ರ ಇಲಾಖೆಗೆ ದೂರನ್ನು ಸಲ್ಲಿಸಿದ್ದಾರೆ. ದೂರಿನನ್ವಯ ಕಾನೂನು ಮಾಪನಶಾಸ್ತ್ರ ಇಲಾಖೆಯ ಅಧಿಕಾರಿಗಳು ಪಾಂಡವಪುರ ಘಟಕಕ್ಕೆ ಭೇಟಿ ನೀಡಿ ಟ್ಯಾಂಕರ್ ಅನ್ನು ಮತ್ತು ಟ್ಯಾಂಕರ್‌ಗೆ ಸಂಬಂಧಿಸಿದ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ. ಹಾಗೆಯೇ ಟ್ಯಾಂಕರ್‌ನ ಮಾಲಕರು, ಚಾಲಕರು ಮತ್ತು ಕ್ಲೀನರ್‌ಗಳನ್ನು ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.