×
Ad

Bengaluru | ಕರ್ತವ್ಯ ಲೋಪ, ನಿರ್ಲಕ್ಷ್ಯ ತೋರಿದ ಆರೋಪ; ಇಬ್ಬರು ಎಎಸ್ಸೈ ಸೇರಿ ನಾಲ್ವರು ಪೊಲೀಸ್ ಸಿಬ್ಬಂದಿ ಅಮಾನತು

Update: 2025-12-04 21:03 IST

ಬೆಂಗಳೂರು : ಕರ್ತವ್ಯ ಲೋಪ, ನಿರ್ಲಕ್ಷ್ಯ ವಹಿಸಿದ ಆರೋಪದಡಿ ನಾಲ್ಕು ಮಂದಿ ಪೊಲೀಸ್ ಸಿಬ್ಬಂದಿಯನ್ನು ಬೆಂಗಳೂರು ಉತ್ತರ ವಿಭಾಗದ ಡಿಸಿಪಿ ನೇಮಗೌಡ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಎಎಸ್ಸೈ ಶ್ರೀನಿವಾಸ್ ಮೂರ್ತಿ(ನಂದಿನಿ ಲೇಔಟ್ ಪೊಲೀಸ್ ಠಾಣೆ), ಎಎಸ್ಸೈ ಜಯರಾಮೇಗೌಡ, ಹೆಡ್‍ಕಾನ್‍ಸ್ಟೇಬಲ್ ಧರ್ಮ(ಸುಬ್ರಮಣ್ಯನಗರ ಪೊಲೀಸ್ ಠಾಣೆ), ಕಾನ್‍ಸ್ಟೇಬಲ್ ನಜೀರ್(ಸಂಜಯನಗರ ಪೊಲೀಸ್ ಠಾಣೆ) ಅಮಾನತ್ತಾದ ಸಿಬ್ಬಂದಿ.

ಪ್ರಕರಣಗಳ ಹಿನ್ನೆಲೆ: ನಂದಿನಿ ಲೇಔಟ್ ಪೊಲೀಸ್ ಠಾಣೆಗೆ ನಿತ್ಯಾನಂದ ಎಂಬುವರು ದೂರು ನೀಡಲು ಬಂದಿದ್ದರು. ಎಎಸ್ಸೈ ಶ್ರೀನಿವಾಸ್ ಮೂರ್ತಿ ಅವರು ಸರಿಯಾಗಿ ಸ್ಪಂದಿಸದೆ ದೂರು ದಾಖಲಿಸಿಕೊಳ್ಳದೆ, ನಿರ್ಲಕ್ಷ್ಯ ವಹಿಸಿದ್ದರು ಎಂದು ನಿತ್ಯಾನಂದ ಅವರು ಸಾಮಾಜಿಕ ಜಾಲತಾಣ ಎಕ್ಸ್‌ ನಲ್ಲಿ ಪೋಸ್ಟ್ ಮಾಡಿದ್ದರು.

ಸುಬ್ರಮಣ್ಯನಗರ ಪೊಲೀಸ್ ಠಾಣೆಯ ಎಎಸ್ಸೈ ಜಯರಾಮೇಗೌಡ ಹಾಗೂ ಹೆಡ್‍ಕಾನ್‍ಸ್ಟೇಬಲ್ ಧರ್ಮ ಅವರಿಗೆ ಪ್ರಕರಣವೊಂದರ ಸಾಕ್ಷಿಗಳನ್ನು ಹಾಜರುಪಡಿಸುವಂತೆ ನ್ಯಾಯಾಲಯ ಸಮನ್ಸ್ ನೀಡಿತ್ತು. ಆದರೆ, ಅವರು ಸಕಾಲಕ್ಕೆ ಸಾಕ್ಷಿಗಳನ್ನು ಹಾಜರುಪಡಿಸದೆ ಲೋಪವೆಸಗಿದ್ದರು.

ಸಂಜಯನಗರ ಠಾಣೆಯ ಕಾನ್‍ಸ್ಟೇಬಲ್ ನಜೀರ್ ಅವರನ್ನು ಸಿಎಂ ಸಿದ್ದರಾಮಯ್ಯ ಅವರ ನಿವಾಸಕ್ಕೆ ಬಂದೋಬಸ್ತ್‌ ಗೆ ನಿಯೋಜಿಸಿದ್ದರೂ ಕರ್ತವ್ಯಕ್ಕೆ ಗೈರಾಗಿ ನಿರ್ಲಕ್ಷ್ಯ ವಹಿಸಿದ್ದರು. ಈ ಸಂಬಂಧ ಡಿಸಿಪಿ ನೇಮಗೌಡ ಅವರು ಕರ್ತವ್ಯ ಲೋಪ ಹಾಗೂ ನಿರ್ಲಕ್ಷ್ಯ ವಹಿಸಿದ್ದ ಆರೋಪದಡಿ ನಾಲ್ವರು ಸಿಬ್ಬಂದಿಯನ್ನು ಅಮಾನತು ಮಾಡಿದ್ದಾರೆ.

ಈ ಬಗ್ಗೆ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಪ್ರತಿಕ್ರಿಯಿಸಿದ್ದು, ಆಡಳಿತಾತ್ಮಕ ಕಾರಣಗಳಿಗಾಗಿ ನಾಲ್ವರನ್ನು ಅಮಾನತು ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News