Bengaluru | ಅನಾರೋಗ್ಯ ಪೀಡಿತ ಪತ್ನಿ ಕೊಲೆಗೈದು ತಾನೂ ಆತ್ಮಹತ್ಯೆ ಮಾಡಿಕೊಂಡ ಪತಿ!
ಸಾಂದರ್ಭಿಕ ಚಿತ್ರ
ಬೆಂಗಳೂರು : ವ್ಹೀಲ್‍ಚೇರ್‌ನಲ್ಲಿ ಕುಳಿತಿದ್ದ ಅನಾರೋಗ್ಯ ಪೀಡಿತ ಪತ್ನಿಯನ್ನು ಬಟ್ಟೆ ಒಣಗಿಸುವ ನೈಲಾನ್ ದಾರದಿಂದ ಉಸಿರುಗಟ್ಟಿಸಿ ಕೊಲೆಗೈದು, ಬಳಿಕ ಪತಿಯೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಲ್ಲಿನ ಸುಬ್ರಮಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಬೇಬಿ(60) ಹತ್ಯೆಗೊಳಗಾಗಿದ್ದು, ಈಕೆ ಪತಿ ವೆಂಕಟೇಶನ್ ಕೃತ್ಯವೆಸಗಿದ ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಡಿ.2ರಂದು ಘಟನೆ ನಡೆದಿದ್ದು ದಂಪತಿ ಪುತ್ರ ಅನಿಲ್ ಎಂಬುವರು ನೀಡಿದ ದೂರಿನ ಮೇರೆಗೆ ಸುಬ್ರಮಣ್ಯಪುರ ಠಾಣೆಯಲ್ಲಿ ಕೊಲೆ ಹಾಗೂ ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸುಬ್ರಮಣ್ಯಪುರದ ಚಿಕ್ಕಗೌಡನಪಾಳ್ಯದಲ್ಲಿ ವೃದ್ಧ ದಂಪತಿ ವಾಸವಾಗಿದ್ದು ಇಬ್ಬರು ಮಕ್ಕಳಿದ್ದಾರೆ. ಮಗ ಅನಿಲ್‍ಗೆ ಮದುವೆಯಾಗಿದ್ದು, ಪತ್ನಿಯೊಂದಿಗೆ ಇದೇ ಮನೆಯಲ್ಲಿದ್ದರು. ವೆಂಕಟೇಶನ್ ಬಿಎಂಟಿಸಿಯಲ್ಲಿ ಬಸ್ ಚಾಲಕರಾಗಿ ನಿವೃತ್ತರಾಗಿದ್ದರು. ಪತ್ನಿ ಬೇಬಿ ಅವರಿಗೆ ನಾಲ್ಕು ವರ್ಷಗಳ ಹಿಂದೆ ಪಾಶ್ರ್ವವಾಯು ಆಗಿ ಅನಾರೋಗ್ಯಕ್ಕೆ ತುತ್ತಾಗಿದ್ದರು. ಮನೆಯಲ್ಲಿ ಮಗ ಹಾಗೂ ಸೊಸೆಯೊಂದಿಗೆ ವಾಸವಾಗಿದ್ದರು ಎಂದು ತಿಳಿದುಬಂದಿದೆ.
ವೃದ್ಧ ದಂಪತಿ ನಡುವೆ ಸಣ್ಣ-ಪುಟ್ಟ ವಿಚಾರಕ್ಕೆ ಆಗಾಗ ಗಲಾಟೆ ನಡೆಯುತಿತ್ತು. ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಇಬ್ಬರು ಜಗಳವಾಡುತ್ತಿದ್ದರು. ಡಿ.2ರಂದು ಮಧ್ಯಾಹ್ನ ಯಾರು ಇಲ್ಲದಿದ್ದಾಗ ಇಬ್ಬರ ನಡುವೆ ಗಲಾಟೆಯಾಗಿದೆ. ಈ ವೇಳೆ, ಬಟ್ಟೆ ಒಣಗಿಸುವ ದಾರದಿಂದ ವ್ಹೀಲ್‍ಚೇರ್‍ನಲ್ಲಿ ಕುಳಿತಿದ್ದ ಪತ್ನಿಯನ್ನು ಕುತ್ತಿಗೆ ಬಿಗಿದು ಹತ್ಯೆ ಮಾಡಿದ್ದಾರೆ. ಅದೇ ದಾರದಿಂದ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೂಲಗಳಿಂದ ಗೊತ್ತಾಗಿದೆ.