ಬೆಂಗಳೂರು ಪೊಲೀಸರ ಕಾರ್ಯಾಚರಣೆ; 18.60 ಕೋಟಿ ಮೌಲ್ಯದ ಹೈಡ್ರೋ ಗಾಂಜಾ ವಶ
ಸಾಂದರ್ಭಿಕ ಚಿತ್ರ | PC : freepik
ಬೆಂಗಳೂರು : ನಿಷೇಧಿತ ಮಾದಕ ವಸ್ತುವನ್ನು ಕಾರಿನಲ್ಲಿಟ್ಟುಕೊಂಡು ಮಾರಾಟ ಮಾಡುತ್ತಿದ್ದ ಪ್ರಕರಣದಡಿ ಇಲ್ಲಿನ ಮಹಾಲಕ್ಷ್ಮೀ ಲೇಔಟ್ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಓರ್ವ ಮಹಿಳೆ ಸೇರಿದಂತೆ ಇಬ್ಬರು ಡ್ರಗ್ ಪೆಡ್ಲರ್ ಗಳನ್ನು ಬಂಧಿಸಿ 18.60 ಕೋಟಿ ರೂ. ಮೌಲ್ಯದ ಹೈಡ್ರೋ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.
ದಾಳಿ ವೇಳೆ ಓರ್ವ ಮಹಿಳೆ ಸೇರಿದಂತೆ ಇಬ್ಬರನ್ನು ಬಂಧಿಸಿ, 18 ಕೆ.ಜಿ. 590 ಗ್ರಾಂ ಹೈಡ್ರೋ ಗಾಂಜಾ, 2 ಮೊಬೈಲ್ ಫೋನ್, ಕೃತ್ಯಕ್ಕೆ ಬಳಸಿದ ಕಾರು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದೇ ಮೊದಲ ಬಾರಿಗೆ ಏರ್ ಪೋರ್ಟ್ ಮೂಲಕ ಕೊರಿಯರ್‍ನಲ್ಲಿ ಬಂದಿರುವ 18 ಕೆ.ಜಿ. 590 ಗ್ರಾಂ ಹೈಡ್ರೋ ಗಾಂಜಾವನ್ನು ವಶಸಿಕೊಳ್ಳಲಾಗಿದೆ. ಈ ಹೈಡ್ರೋ ಗಾಂಜಾ ಬ್ಯಾಂಕಾಕ್‍ನಿಂದ ಬಂದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಇದರಲ್ಲಿ ಹಲವರು ಶಾಮಿಲಾಗಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಅವರನ್ನು ಶೀಘ್ರದಲ್ಲಿ ಬಂಧಿಸಲಾಗುವುದು ಎಂದು ಪೊಲೀಸರು ವಿವರಿಸಿದ್ದಾರೆ.
ವಿವಿಧ ಠಾಣಾ ವ್ಯಾಪ್ತಿಯಲ್ಲಿ ಗಾಂಜಾ ವಶ: ಆರೋಪಿಗಳ ಬಂಧನ
ಇನ್ನು, ಗಾಂಜಾ ಮಾರಾಟ ಮಾಡುತ್ತಿದ್ದ ವಿವಿಧ ಪ್ರಕರಣಗಳಲ್ಲಿ ಆರ್.ಟಿ.ನಗರ ಪೊಲೀಸರು ಐವರನ್ನು ಬಂಧಿಸಿ 5.43 ಲಕ್ಷ ರೂ. ಮೌಲ್ಯದ ಐದು ಕೆ.ಜಿ. 437 ಗ್ರಾಂ ಗಾಂಜಾವನ್ನು ಜಪ್ತಿ ಮಾಡಿದ್ದಾರೆ. ಮಲ್ಲೇಶ್ವರಂ ಪೊಲೀಸರು ಗಾಂಜಾ ಮಾರುತ್ತಿದ್ದ ಓರ್ವನನ್ನು ಬಂಧಿಸಿ, ಆತನಿಂದ 77,600 ರೂ. ಮೌಲ್ಯದ 772 ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಜೆ.ಸಿ.ನಗರ ಪೊಲೀಸರು ಎಂಡಿಎಂಎ ಮಾರುತ್ತಿದ್ದ ವಿದೇಶಿ ಪ್ರಜೆಯನ್ನು ಬಂಧಿಸಿ, ಆತನಿಂದ 1.35 ಲಕ್ಷ ರೂ. ಮೌಲ್ಯದ 21 ಗ್ರಾಂ ಎಂಡಿಎಂಎಯನ್ನು ವಶಪಡಿಸಿಕೊಂಡಿದ್ದಾರೆ. ಆರ್‌ಎಂಸಿ ಯಾರ್ಡ್ ಪೊಲೀಸರು ಗಾಂಜಾ ಮಾರುತ್ತಿದ್ದ ಓರ್ವನನ್ನು ಬಂಧಿಸಿ 8.35 ಲಕ್ಷ ಮೌಲ್ಯದ 8 ಕೆ.ಜಿ. 350 ಗ್ರಾಂ ಗಾಜಾ ವಶಪಡಿಸಿಕೊಂಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.