×
Ad

ಸಿದ್ದರಾಮಯ್ಯ ಎಷ್ಟು ಬಾರಿ ಜಿಎಸ್‍ಟಿ ಕೌನ್ಸಿಲಿಂಗ್ ಸಭೆಗೆ ಹೋಗಿದ್ದಾರೆ : ಎಚ್.ವಿಶ್ವನಾಥ್

Update: 2026-01-30 18:56 IST

ಬೆಂಗಳೂರು : ಕೇಂದ್ರ ಸರಕಾರದಿಂದ ಜಿಎಸ್‍ಟಿಯಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು ಸದನದಲ್ಲಿ ಕಾಂಗ್ರೆಸ್‍ನವರು ಬೊಬ್ಬೆ ಹೊಡೆದುಕೊಂಡರೆ ನ್ಯಾಯ ಸಿಗುತ್ತದೆಯೇ?, ಹಣಕಾಸು ಖಾತೆಯನ್ನು ಹೊಂದಿರುವ ಸಿಎಂ ಸಿದ್ದರಾಮಯ್ಯ ಎಷ್ಟು ಬಾರಿ ದಿಲ್ಲಿಯ ಜಿಎಸ್‍ಟಿ ಕೌನ್ಸಿಲಿಂಗ್ ಸಭೆಗೆ ಹೋಗಿದ್ದಾರೆ ಎಂದು ಬಿಜೆಪಿ ಸದಸ್ಯ ಎಚ್.ವಿಶ್ವನಾಥ್ ತರಾಟೆಗೆ ತೆಗೆದುಕೊಂಡ ಪ್ರಸಂಗ ಮೇಲ್ಮನೆಯಲ್ಲಿ ನಡೆಯಿತು.

ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲೆ ಕಾಂಗ್ರೆಸ್ ಸದಸ್ಯ ಐವಾನ್ ಡಿಸೋಜಾ ಮಾತನಾಡುತ್ತಾ, ಜಿಎಸ್‍ಟಿ ವಿಷಯದಲ್ಲಿ ಕರ್ನಾಟಕದ ಪಾಲು ಬಂದಿಲ್ಲ. ಕಾಂಗ್ರೆಸ್ ಜಾರಿಗೆ ತಂದ ಯೋಜನೆಗಳ ಹೆಸರು ಬದಲಿಸುವುದೇ ಮೋದಿಯವರ ಸಾಧನೆ. ಜಿಎಸ್‍ಟಿ, ತೆರಿಗೆ ಪಾಲು ಸೇರಿದಂತೆ ಎಲ್ಲದರಲ್ಲೂ ಪ್ರಧಾನಿ ಮೋದಿ ಸರಕಾರ ಕರ್ನಾಟಕಕ್ಕೆ ಅನ್ಯಾಯ ಮಾಡಿದೆ ಎಂದು ವಾಗ್ದಾಳಿ ನಡೆಸಿದರು.

ಈ ವೇಳೆ ಮಧ್ಯಪ್ರವೇಶಿಸಿದ ಎಚ್.ವಿಶ್ವನಾಥ್, ಕೇಂದ್ರದಿಂದ ಜಿಎಸ್‍ಟಿ ಅನ್ಯಾಯ ಆಗಿದೆ ಎಂದು ಇಲ್ಲಿ ಬೊಬ್ಬೆ ಹೊಡೆದುಕೊಂಡರೆ ನ್ಯಾಯ ಸಿಗುತ್ತದೆಯೇ? ಮುಖ್ಯಮಂತ್ರಿ ಸಿದ್ದರಾಮಯ್ಯ ಎಷ್ಟು ಬಾರಿ ಜಿಎಸ್‍ಟಿ ಕೌನ್ಸಿಲಿಂಗ್ ಸಭೆಗೆ ಹೋಗಿದ್ದಾರೆ ಎಂದು ಪ್ರಶ್ನೆ ಮಾಡಿದರು.

ಎಚ್.ವಿಶ್ವನಾಥ್ ಅವರ ಈ ಹೇಳಿಕೆಗೆ ಆಡಳಿತ ಪಕ್ಷದ ಸದಸ್ಯರಿಂದ ತೀವ್ರ ವಿರೋಧ ವ್ಯಕ್ತವಾಯಿತು. ಆಗ ಪ್ರತಿಪಕ್ಷದ ಸದಸ್ಯರೂ ಕೂಡ ಪ್ರತಿದಾಳಿ ನಡೆಸಿದರು. ನಾನು ಯಾವುದೇ ಸರಕಾರವನ್ನು ಗುರಿಯಾಗಿಟ್ಟುಕೊಂಡು ಟೀಕೆ ಮಾಡಿಲ್ಲ. ಹಣಕಾಸು ಖಾತೆ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಎಸ್‍ಟಿ ಕೌನ್ಸಿಲಿಂಗ್ ಸಭೆಗೆ ಹೋಗಿ ರಾಜ್ಯಕ್ಕೆ ಆಗಿರುವ ಅನ್ಯಾಯದ ಬಗ್ಗೆ ಪ್ರಸ್ತಾಪಿಸಬೇಕಿತ್ತು. ಸಭೆಗೆ ಹೋಗದೇ ಇಲ್ಲಿ ನೀವು ಮಾತನಾಡಿದರೆ ಏನು ಪ್ರಯೋಜನ? ಎಂದು ಎಚ್.ವಿಶ್ವನಾಥ್ ಪ್ರಶ್ನಿಸಿದರು.

ಜಿಎಸ್‍ಟಿ ಸಭೆಗೆ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು ಬಂದು ತಮ್ಮ ರಾಜ್ಯದ ಬೇಡಿಕೆಯನ್ನು ಸಲ್ಲಿಸುತ್ತಾರೆ. ಅಲ್ಲಿ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಬೇಕು. ಆಗ ಇದನ್ನು ಪರಿಶೀಲಿಸಿ ರಾಜ್ಯಗಳಿಗೆ ನ್ಯಾಯ ಒದಗಿಸುತ್ತಾರೆ. ಸುಮ್ಮನೆ ಇಲ್ಲಿ ಮಾತನಾಡಿದರೆ ಯಾವುದೇ ಪ್ರಯೋಜನ ಆಗುವುದಿಲ್ಲ ಎಂದು ಎಚ್.ವಿಶ್ವನಾಥ್ ಹೇಳಿದರು.

ಈ ಹಂತದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ದಿಲ್ಲಿಯಲ್ಲಿ ನಡೆಯುವ ಜಿಎಸ್‍ಟಿ ಕೌನ್ಸಿಲಿಂಗ್ ಸಭೆಗೆ ಮುಖ್ಯಮಂತ್ರಿಗಳು ಹಾಜರಾಗಲೇಬೇಕೆಂಬ ಕಡ್ಡಾಯವಿಲ್ಲ. ರಾಜ್ಯದ ಪರವಾಗಿ ಯಾರನ್ನಾದರೂ ಕಳುಹಿಸಬಹುದು. ಕಂದಾಯ ಸಚಿವ ಕೃಷ್ಣಭೈರೇಗೌಡರು ರಾಜ್ಯ ಸರಕಾರದ ಪರವಾಗಿ ಪ್ರತಿನಿಧಿಸಿದ್ದಾರೆ. ಕರ್ನಾಟಕಕ್ಕೆ ಯಾವ ರೀತಿ ಅನ್ಯಾಯವಾಗಿದೆ ಎಂಬುದನ್ನು ಹೇಳಿದ್ದಾರೆ. ಆದರೂ ಕೇಂದ್ರದಿಂದ ನಮಗೆ ಯಾವುದೇ ನ್ಯಾಯ ಸಿಕ್ಕಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ಹಿಂದೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಅಂದು ಬಸವರಾಜ ಬೊಮ್ಮಾಯಿ ಅವರನ್ನು ಜಿಎಸ್‍ಟಿ ಕೌನ್ಸಿಲಿಂಗ್ ಸಭೆಗೆ ಕಳುಹಿಸಿಕೊಟ್ಟಿದ್ದರು. ಇದರಲ್ಲಿ ಯಾವುದೇ ಪ್ರಮಾದವಿಲ್ಲ ಎಂದು ಪ್ರಿಯಾಂಕ್ ಖರ್ಗೆ ಸರಕಾರದ ನಡೆಯನ್ನು ಸಮರ್ಥಿಸಿಕೊಂಡರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News