ಮೇಲ್ಮನೆಯಲ್ಲಿ ಎರಡು ದಿನಗಳ ಕೋಲಾಹಲಕ್ಕೆ ತೆರೆ | ನಿಯಮ ಮೀರಿ ನಡೆದುಕೊಂಡರೆ ನಿರ್ದಾಕ್ಷಿಣ್ಯ ಕ್ರಮ: ಸಭಾಪತಿ ಹೊರಟ್ಟಿ ಎಚ್ಚರಿಕೆ
ಬೆಂಗಳೂರು : ರಾಜ್ಯಪಾಲರನ್ನು ಟೀಕಿಸುವ ಭರದಲ್ಲಿ ಅಸಂವಿಧಾನಿಕ ಪದ ಬಳಕೆ ಮಾಡಿದ್ದ ಸಂಬಂಧ ಕಾಂಗ್ರೆಸ್‍ನ ಹಿರಿಯ ಸದಸ್ಯ ಬಿ.ಕೆ.ಹರಿಪ್ರಸಾದ್ ಅವರನ್ನು ಸದನದಿಂದ ಅಮಾನತು ಮಾಡಬೇಕೆಂಬ ಪ್ರತಿಪಕ್ಷದ ಒತ್ತಾಯಕ್ಕೆ ಸಭಾಪತಿ ಬಸವರಾಜ ಹೊರಟ್ಟಿ ಅವರು ರೂಲಿಂಗ್ ನೀಡುವ ಮೂಲಕ ವಿಧಾನ ಪರಿಷತ್‍ನಲ್ಲಿ ಎರಡು ದಿನಗಳಿಂದ ನಡೆಯುತ್ತಿದ್ದ ಕೋಲಾಹಲಕ್ಕೆ ತೆರೆ ಎಳೆದರು.
ಶುಕ್ರವಾರ ಬೆಳಗ್ಗೆ ಕಲಾಪ ಆರಂಭವಾಗುತ್ತಿದ್ದಂತೆ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಆಕ್ಷೇಪಾರ್ಹ ಹೇಳಿಕೆ ನೀಡುವ ಮೂಲಕ ನಮ್ಮನ್ನು ನಿಂದಿಸಿರುವ ಬಿ.ಕೆ.ಹರಿಪ್ರಸಾದ್ ಕ್ಷಮೆಯಾಚಿಸಬೇಕು ಎಂಬುದು ನಮ್ಮ ಒತ್ತಾಯವಾಗಿದೆ. ಅವರನ್ನು ಸದನದಿಂದ ಕೂಡಲೇ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.
ಈ ವೇಳೆ ಮಾತನಾಡಿದ ಸಭಾಪತಿ ಹೊರಟ್ಟಿ, ಸದನದಲ್ಲಿ ಹಿಂದೆಯೂ ಈ ರೀತಿಯ ಅನೇಕ ಘಟನೆಗಳು ನಡೆದಿದೆ. ಇದು ಹಿರಿಯ ಸದನ. ನಾವೆಲ್ಲ ಒಂದು ಕುಟುಂಬದಂತೆ. ಒಂದು ಮನೆಯಲ್ಲಿ ಎಲ್ಲರೂ ಒಂದೇ ರೀತಿಯ ಇರಲು ಸಾಧ್ಯವಿಲ್ಲ. ತಪ್ಪುಗಳನ್ನು ತಿದ್ದಿಕೊಂಡು ಮುಂದೆ ನಡೆಯಬೇಕು. ಇಂತಹ ಘಟನೆಗಳು ಮರುಕಳಿಸಬಾರದು. ಇದರ ಬಗ್ಗೆ ಸರಕಾರ ವಿಷಾದ ವ್ಯಕ್ತಪಡಿಸಿದೆ. ಈ ಬಗ್ಗೆ ಇನ್ನು ಯಾರೂ ಮಾತನಾಡಬಾರದು ಎಂದು ರೂಲಿಂಗ್ ನೀಡಿದರು.
ಆಗ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಸದನದ ಸಮಯವನ್ನು ಹಾಳು ಮಾಡಬೇಕೆಂಬ ಉದ್ದೇಶ ನಮಗಿಲ್ಲ. ಕಲಾಪವು ಸುಗಮವಾಗಿ ನಡೆಯಲಿ ಎಂಬ ಆಶಯ ನಮಗೂ ಇದೆ. ಆದರೆ, ರಾಜ್ಯಪಾಲರ ಕುರಿತು ಸದಸ್ಯರು ಬಳಸಿರುವ ಪದ ಯಾರಿಗೂ ಶೋಭೆ ತರುವುದಿಲ್ಲ. ಸಾರ್ವಜನಿಕ ಜೀವನದಲ್ಲಿರುವವರಿಗೆ ಇದು ಸರಿ ಕಾಣುತ್ತದೆಯೇ? ಎಂದು ಪ್ರಶ್ನಿಸಿದರು.
ಈ ವೇಳೆ ಬಿಜೆಪಿ ಹಿರಿಯ ಸದಸ್ಯ ಎಚ್.ವಿಶ್ವನಾಥ್ ಮಾತನಾಡಿ, ಹಿಂದೆ ಆರ್.ಗುಂಡೂರಾವ್ ಅವರು ಮುಖ್ಯಮಂತ್ರಿಯಾಗಿದ್ದಾಗ ದೇವರಾಜ ಅರಸು ಪ್ರತಿಪಕ್ಷದ ನಾಯಕರಾಗಿದ್ದರು. ಆಗ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವರಾಗಿದ್ದ ಸಿ.ಎಂ.ಇಬ್ರಾಹಿಂ ಅವರು ಬಳಸಿದ ಪದವೊಂದಕ್ಕೆ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರು ಪಕ್ಷಾತೀತವಾಗಿ ಖಂಡಿಸಿದರು. ಇದರಿಂದ ಇಬ್ರಾಹಿಂ ಸದನದಿಂದ ಎದ್ದು ದಿಢೀರನೆ ಹೊರ ನಡೆದಿದ್ದರು ಎಂದು ನೆನಪಿಸಿಕೊಂಡರು. ಸದನದಲ್ಲಿ ಘಟನೆ ನಡೆದುಹೋಗಿದೆ. ಮಾತಿನ ಭರದಲ್ಲಿ ಶಬ್ದಗಳು ಬಂದಿವೆ. ಅದನ್ನು ಮುಂದುವರೆಸುವ ಅಗತ್ಯವಿಲ್ಲ ಎಂದು ಸಲಹೆಕೊಟ್ಟರು.
ಅಂತಿಮವಾಗಿ ಸಭಾಪತಿ ಹೊರಟ್ಟಿ ಮಾತನಾಡಿ, ಸುದ್ದಿ ಮಾಧ್ಯಮಗಳಲ್ಲಿ ನಮ್ಮ ಬಗ್ಗೆ ಏನು ಬರುತ್ತಿದೆ ಎಂಬುದನ್ನು ಎಲ್ಲರೂ ಗಮನಿಸಿ, ಸದನ ಸರಿಯಾಗಿ ನಡೆಯಬೇಕು. ಇನ್ನು ಮುಂದೆ ಸದನದಲ್ಲಿ ಯಾರಾದರೂ ನಿಯಮಬಾಹಿರವಾಗಿ ನಡೆದುಕೊಂಡರೆ ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇನೆ ಎಂದು ಎಚ್ಚರಿಸಿ, ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಬಗ್ಗೆ ಚರ್ಚೆಗೆ ಸದಸ್ಯರಿಗೆ ಅವಕಾಶ ಕಲ್ಪಿಸಿದರು.