×
Ad

ಎಸ್‌ಸಿ-ಎಸ್‌ಟಿ ಮೀಸಲಾತಿ ಕಾಯ್ದೆ ಅನ್ವಯ ನೇಮಕಾತಿ : ಮುಂದಿನ ವಿಚಾರಣೆವರೆಗೆ ಕ್ರಮಕೈಗೊಳ್ಳದಂತೆ ಸರಕಾರಕ್ಕೆ ನಿರ್ದೇಶನ

Update: 2025-11-20 01:03 IST

ಬೆಂಗಳೂರು : ಪರಿಶಿಷ್ಟ ಜಾತಿ, ಪಂಗಡಗಳ ಮೀಸಲಾತಿ ಪ್ರಮಾಣ ಹಿಗ್ಗಿಸಿ ಒಟ್ಟು ಮೀಸಲು ಪ್ರಮಾಣವನ್ನು ಶೇ.50ರಿಂದ 56ಕ್ಕೆ ಹೆಚ್ಚಿಸಿದ್ದ ಕರ್ನಾಟಕ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಪಂಗಡಗಳ (ಶೈಕ್ಷಣಿಕ ಸಂಸ್ಥೆಗಳಲ್ಲಿನ ಸ್ಥಾನಗಳಲ್ಲಿ ಮತ್ತು ರಾಜ್ಯಾಧೀನ ಸೇವೆಗಳಲ್ಲಿ ನೇಮಕಾತಿ ಅಥವಾ ಹುದ್ದೆಗಳಲ್ಲಿ ಮೀಸಲಾತಿ) ಕಾಯ್ದೆ-2022ಕ್ಕೆ ಸಂಬಂಧಿಸಿ ಮುಂದಿನ ವಿಚಾರಣೆವರೆಗೂ ಯಾವುದೇ ಕ್ರಮ ಕೈಗೊಳ್ಳಬಾರದು ಎಂದು ಹೈಕೋರ್ಟ್ ಗುರುವಾರ ರಾಜ್ಯ ಸರಕಾರಕ್ಕೆ ನಿರ್ದೇಶಿಸಿದೆ.

ಡಾ.ಅಂಬೇಡ್ಕರ್ ಪರಿಶಿಷ್ಟ ಜಾತಿಗಳ ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ ಮಹೇಂದ್ರ ಕುಮಾರ್ ಮಿತ್ರ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಸಿ.ಎಂ.ಪೂಣಚ್ಚ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿ ಈ ಕುರಿತಂತೆ ಆದೇಶಿಸಿತು.

ಹೆಚ್ಚುವರಿ ಅಡ್ವೋಕೇಟ್ ಜನರಲ್ ರೊಬೆನ್ ಜೇಕಬ್ ಅವರು, ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋ ರ್ಟ್‌ ಮತ್ತೊಂದು ಪೀಠ, ನೇಮಕಾತಿ ಪ್ರಕ್ರಿಯೆಯಗಳನ್ನು ನಡೆಸಬಹುದು. ಆದರೆ, ನೇಮಕಾತಿ ಆದೇಶಗಳನ್ನು ನೀಡಬಾರದು ಎಂದು ಆದೇಶಿಸಿದೆ. ಹೀಗಾಗಿ, ಅದೇ ಆದೇಶವನ್ನು ಈ ಅರ್ಜಿಯಲ್ಲಿಯೂ ಮುಂದುವರೆಸಬೇಕು. ಕಳೆದ ಒಂದು ವರ್ಷದಿಂದ ನೇಮಕಾತಿ ನಡೆದಿಲ್ಲ. ಈಗಷ್ಟೇ ನೇಮಕಾತಿ ಪ್ರಕ್ರಿಯೆ ಪ್ರಾರಂಭವಾಗಿದೆ. ಕಾಯ್ದೆ ಅನುಷ್ಠಾನಕ್ಕೆ ತಡೆ ನೀಡಿದರೆ ಮತ್ತಷ್ಟು ವಿಳಂಬವಾಗಲಿದೆ ಎಂದರು.

'ರಾಜ್ಯದಲ್ಲಿ ಮೀಸಲಾತಿ ಹೆಚ್ಚಳ ಮಾಡುವ ಸಂಬಂಧ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್ ದಾಸ್ ಆಯೋಗವನ್ನು ರಚನೆ ಮಾಡಲಾಗಿತ್ತು. ಈ ಆಯೋಗವು, ಮೀಸಲಾತಿ ಹೆಚ್ಚಳಕ್ಕೆ ಸಂಬಂಧಿಸಿದಂತೆ ಎಲ್ಲ ರೀತಿಯ ದತ್ತಾಂಶ ಸಂಗ್ರಹಿಸಿ ಹಲವು ಶಿಫಾರಸುಗಳನ್ನು ಮಾಡಿದೆ. ಇದರ ಆಧಾರದಲ್ಲಿ ಮೀಸಲಾತಿ ಪ್ರಮಾಣ ಹೆಚ್ಚಳ ಮಾಡಿ ಕಾಯ್ದೆ ರೂಪಿಸಲಾಗಿದೆ ಎಂದರು.

ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಪೀಠವು ಇಷ್ಟು ದಿನ ಸರಕಾರ ಏನು ಮಾಡುತ್ತಿತ್ತು. ಇನ್ನೂ 6 ತಿಂಗಳವರೆಗೆ ನೇಮಕಾತಿ ಮಾಡದಿದ್ದರೆ ಏನೂ ಆಗುವುದಿಲ್ಲ. ಮೊದಲು ಅರ್ಜಿಯಲ್ಲಿ ಎತ್ತಿರುವ ಕಾನೂನಾತ್ಮಕ ಅಂಶಗಳು ಪರಿಹಾರ ವಾಗಲಿ ಎಂಬ ಅಭಿಪ್ರಾಯ ವ್ಯಕ್ತಪಡಿಸಿ, ವಿಚಾರಣೆಯನ್ನು ಮುಂದೂಡಿತು.

ಪರಿಶಿಷ್ಟ ಜಾತಿಗೆ ಶೇ 15ರಿಂದ 17 ಮತ್ತು ಪರಿಶಿಷ್ಟ ಪಂಗಡಕ್ಕೆ ಶೇ.3ರಿಂದ ಶೇ.7ರವರೆಗೂ ಮೀಸಲಾತಿ ಹೆಚ್ಚಳ ಮಾಡಿ ಒಟ್ಟು ಮೀಸಲಾತಿಯನ್ನು 56ಕ್ಕೆ ಹೆಚ್ಚಿಸಿ ರಾಜ್ಯ ಸರಕಾರ 2023ರ ಜ.12ರಂದು ಅಧಿಸೂಚನೆ ಹೊರಡಿಸಿದೆ. ಸರಕಾರ ಅನುಮತಿ ಪಡೆಯದೇ ಮೀಸಲಾತಿ ಹೆಚ್ಚಳ ಮಾಡಿರುವುದು ಸಂವಿಧಾನ ಬಾಹಿರ. ಆದ್ದರಿಂದ, ಕಾಯ್ದೆಯನ್ನು ಅಸಾಂವಿಧಾನಿಕ ಎಂದು ಘೋಷಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ. ಅರ್ಜಿದಾರರು ಸ್ವತಃ ವಾದ ಮಂಡಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News