×
Ad

ಎಲ್‌ಎಲ್‌ಬಿ ಕೋರ್ಸ್ ಕನಿಷ್ಠ ಅರ್ಹತಾ ಅಂಕ ನಿಗದಿ; ಪಿಐಎಲ್ ಇತ್ಯರ್ಥಪಡಿಸಿದ ಹೈಕೋರ್ಟ್

Update: 2025-11-27 23:46 IST

ಬೆಂಗಳೂರು : ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ (ಕೆಎಸ್‌ಎಲ್‌ಯು) 3 ವರ್ಷಗಳ ಎಲ್‌ಎಲ್‌ಬಿ ಕೋರ್ಸ್‌ಗೆ ಪ್ರವೇಶಕ್ಕಾಗಿ ಒಬಿಸಿ ಅಭ್ಯರ್ಥಿಗಳಿಗೆ ಗೆಜೆಟ್‌ ಅಧಿಸೂಚನೆಯಿಲ್ಲದೆ ಶೇ.42 ಕನಿಷ್ಠ ಅರ್ಹತಾ ಅಂಕ ನಿಗದಿಪಡಿಸುವುದನ್ನು ಕಾನೂನುಬಾಹಿರವೆಂದು ಘೋಷಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್‌ ಇತ್ಯರ್ಥಪಡಿಸಿದೆ.

ಯಂಕಪ್ಪ ಆರ್‌. ಸಕ್ರೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ವಿಭಾಗೀಯ ನ್ಯಾಯಪೀಠ ಅರ್ಜಿ ಪುರಸ್ಕರಿಸಲು ನಿರಾಕರಿಸಿತಲ್ಲದೆ, ಕೆಎಸ್‌ಎಲ್‌ಯು ಅಧಿಸೂಚನೆಯಲ್ಲಿ ದೋಷ ಹುಡುಕಲಾಗದು. ಆದ್ದರಿಂದ, ಅರ್ಜಿ ವಿಲೇವಾರಿ ಮಾಡಲಾಗುತ್ತಿದೆ ಎಂದು ಆದೇಶಿಸಿದೆ.

ಹೈಕೋರ್ಟ್ ಹೇಳಿದ್ದೇನು?

2008ರ ರಾಷ್ಟ್ರೀಯ ಕಾನೂನು ಶಾಲೆ (ಎನ್‌ಎಲ್‌ಎಸ್‌ಐಯು) ಕಾನೂನು ಶಿಕ್ಷಣ ನಿಯಮಗಳ ನಿಯಮ 7 ಅನ್ನು ಉಲ್ಲೇಖಿಸಿರುವ ನ್ಯಾಯಾಲಯ, ಅದು ಎಲ್‌ಎಲ್‌ಬಿ ಕೋರ್ಸ್‌ಗಳ ಪ್ರವೇಶಕ್ಕಾಗಿ ಅರ್ಹತಾ ಪರೀಕ್ಷೆಗೆ ಕನಿಷ್ಠ ಶೇಕಡಾವಾರು ಅಂಕಗಳನ್ನು ನಿರ್ದಿಷ್ಟಪಡಿಸುತ್ತದೆ. ನಂತರ ಬಿಸಿಐ ಅರ್ಹತಾ ಪರೀಕ್ಷೆಯಲ್ಲಿ ಕನಿಷ್ಠ ಶೇಕಡಾವಾರು ಅಂಕಗಳನ್ನು ನಿಗದಿಪಡಿಸಬಹುದು. ಆದರೆ, ಅದರ ನಿಯಮಗಳಲ್ಲಿ ಒಬಿಸಿ ವಿದ್ಯಾರ್ಥಿಗಳಿಗೆ ಶೇ. 42ಕ್ಕಿಂತ ಕಡಿಮೆ ಮತ್ತು ಎಸ್‌ಸಿ/ಎಸ್‌ಟಿ ವರ್ಗಕ್ಕೆ ಸೇರಿದ ಅಭ್ಯರ್ಥಿಗಳಿಗೆ ಶೇ. 40ಕ್ಕಿಂತ ಕಡಿಮೆ ಇರಬಾರದೆಂದು ಸ್ಪಷ್ಟವಾಗಿದೆ ಎಂದು ನ್ಯಾಯಾಲಯ ಆದೇಶದಲ್ಲಿ ತಿಳಿಸಿದೆ.

ಅರ್ಜಿದಾರರ ವಾದವೇನು?

ವಿಚಾರಣೆ ವೇಳೆ ವಾದ ಮಂಡಿಸಿದ ಅರ್ಜಿದಾರರ ಪರ ವಕೀಲರು, ಒಬಿಸಿ ವರ್ಗಕ್ಕೆ ಸೇರಿದ ಅಭ್ಯರ್ಥಿಗಳ ಶೈಕ್ಷಣಿಕ ಮಾನದಂಡಗಳು ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ ನಿಗದಿಪಡಿಸಿದ ಕನಿಷ್ಠ ಅಂಕಗಳಿಗೆ ಸಮನಾಗಿರಬೇಕು. ಅದರಂತೆ ಎನ್‌ಎಲ್‌ಎಸ್‌ಐಯು ಎಸ್‌ಸಿ/ಎಸ್‌ಟಿ ಮತ್ತು ಒಬಿಸಿ ವರ್ಗಕ್ಕೆ ಸೇರಿದ ಅಭ್ಯರ್ಥಿಗಳಿಗೆ ಶೇ. 40 ಕನಿಷ್ಠ ಅಂಕಗಳನ್ನು ನಿಗದಿಪಡಿಸಿದೆ. ಆದರೆ, ಕಾನೂನು ವಿವಿ ಆ ನಿಯಮಗಳನ್ನು ಉಲ್ಲಂಘಿಸಿದೆ ಎಂದು ಆಕ್ಷೇಪಿಸಿದರು.

ಪ್ರಕರಣವೇನು?

ಕೆಎಸ್‌ಎಲ್‌ಯುಗೆ ಸಂಯೋಜಿತವಾಗಿರುವ ಕಾನೂನು ಕಾಲೇಜುಗಳ ಪ್ರವೇಶಕ್ಕಾಗಿ ಶಿಕ್ಷಣ ಮಾನದಂಡಗಳಿಗೆ ಸಂಬಂಧಿಸಿದ ಅರ್ಹತಾ ಷರತ್ತುಗಳನ್ನು ಅರ್ಜಿದಾರರು ಪ್ರಶ್ನಿಸಿದ್ದರು. 2025-26 ಶೈಕ್ಷಣಿಕ ವರ್ಷಕ್ಕೆ 3 ವರ್ಷಗಳ ಎಲ್‌ಎಲ್‌ಬಿ ಕೋರ್ಸ್‌ಗೆ ಪ್ರವೇಶಕ್ಕಾಗಿ ವಿಶ್ವವಿದ್ಯಾಲಯವು 2025ರ ಜುಲೈ 19ರಂದು ಪ್ರವೇಶ ಅಧಿಸೂಚನೆಯನ್ನು ಹೊರಡಿಸಿತ್ತು. ಈ ಅಧಿಸೂಚನೆಯಲ್ಲಿ ನಿರ್ದಿಷ್ಟಪಡಿಸಿದ ಅರ್ಹತಾ ಮಾನದಂಡಗಳ ಪ್ರಕಾರ, ಇತರ ಹಿಂದುಳಿದ ವರ್ಗಗಳಿಗೆ ಸೇರಿದ ಅಭ್ಯರ್ಥಿಗಳು ಅರ್ಹತಾ ಪರೀಕ್ಷೆಯಲ್ಲಿ ಕನಿಷ್ಠ ಶೇ.42 ಅಂಕಗಳನ್ನು ಪಡೆದಿರಬೇಕು. ಈ ಮಾನದಂಡಗಳನ್ನು ಎಸ್‌ಸಿ ಮತ್ತು ಎಸ್‌ಟಿ ಅಭ್ಯರ್ಥಿಗಳಿಗೆ ಒಟ್ಟು ಶೇ.40 ಅಂಕಗಳಿಗೆ ಸಡಿಲಿಸಲಾಗಿತ್ತು. ಇದನ್ನು ಆಕ್ಷೇಪಿಸಿ ಅರ್ಜಿದಾರರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News