ಜ್ಞಾನಭಾರತಿ ಕ್ಯಾಂಪಸ್‌ನ ಬಯೋಪಾರ್ಕ್‌ನಲ್ಲಿ ಮರ ಕಡಿಯದಂತೆ ಹೈಕೋರ್ಟ್ ಮಧ್ಯಂತರ ಆದೇಶ
ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಕ್ಯಾಂಪಸ್‌ನ ಬಯೋಪಾರ್ಕ್‌ನಲ್ಲಿ ಸದ್ಯ ಯಾವುದೇ ಮರಗಳನ್ನು ಕತ್ತರಿಸದಂತೆ ನಿರ್ಬಂಧ ವಿಧಿಸಿ ಹೈಕೋರ್ಟ್ ಮಧ್ಯಂತರ ಆದೇಶ ಹೊರಡಿಸಿದೆ.
ಜ್ಞಾನಭಾರತಿ ಕ್ಯಾಂಪಸ್‌ನಲ್ಲಿ ವಿವಿಧ ಸಂಸ್ಥೆಗಳಿಗೆ ಭೂಮಿ ಹಂಚಿಕೆ ಮಾಡಿರುವುದನ್ನು ಹಾಗೂ ಅವ್ಯಾಹತವಾಗಿ ಮರಗಳನ್ನು ಕತ್ತರಿಸುವುದನ್ನು ಪ್ರಶ್ನಿಸಿ ನಗರದ ಸ್ವಯಂ ಜಾಗೃತಿ ಸೇವಾ ಟ್ರಸ್ಟ್‌ನ ಅಧ್ಯಕ್ಷ ಸಿ. ಅಜಯ್ ಕುಮಾರ್ ಹಾಗೂ ಕೋರಮಂಗಲದ ಪಾರ್ವತಿ ಶ್ರೀರಾಮ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ.ಪೂಣಚ್ಚ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಮಧ್ಯಂತರ ಆದೇಶ ನೀಡಿ ವಿಚಾರಣೆಯನ್ನು ಡಿಸೆಂಬರ್ 9ಕ್ಕೆ ಮುಂದೂಡಿದೆ.
ವಿಚಾರಣೆ ವೇಳೆ ವಾದ ಮಂಡಿಸಿದ ಅರ್ಜಿದಾರರ ಪರ ವಕೀಲರು, ನ್ಯಾಯಾಲಯದಲ್ಲಿ ಅರ್ಜಿ ಬಾಕಿ ಇರುವಾಗಲೇ, ಕ್ಯಾಂಪಸ್‌ನಲ್ಲಿ ಕೆಲ ಮರಗಳನ್ನು ಕತ್ತರಿಸಲಾಗಿದ್ದು, ಕೆಲವು ಮರಗಳನ್ನು ಸ್ಥಳಾಂತರ ಮಾಡುವ ಕಾರ್ಯ ನಡೆದಿದೆ. ಜತೆಗೆ, ಪ್ರತಿವಾದಿಗಳು 350 ಮರಗಳನ್ನು ಕತ್ತರಿಸುವ ಸಂಬಂಧ ಸಾರ್ವಜನಿಕ ನೋಟಿಸ್ ಸಹ ಹೊರಡಿಸಿದ್ದಾರೆ’ ಎಂದು ನ್ಯಾಯಪೀಠಕ್ಕೆ ವಿವರಿಸಿದರು.
ಆಗ ನ್ಯಾಯಪೀಠ, ಈಗಾಗಲೇ ಕತ್ತರಿಸಿರುವ ಮರಗಳಿಗೆ ಮತ್ತು ಸ್ಥಳಾಂತರ ಮಾಡಿರುವ ಮರಗಳಿಗೆ ಏನೂ ಮಾಡಲಾಗದು. ಆದರೆ, ಸದ್ಯಕ್ಕೆ ಹೊಸದಾಗಿ ಯಾವುದೇ ಮರಗಳನ್ನು ಕತ್ತರಿಸಬಾರದು ಎಂದು ಬೆಂಗಳೂರು ವಿಶ್ವವಿದ್ಯಾಲಯ, ಗ್ರೇಟರ್ ಬೆಂಗಳೂರು ಪ್ರಾಧಿಕಾರ, ರಾಜ್ಯ ಸರ್ಕಾರ, ಎನ್‌ಎಲ್‌ಎಸ್‌ಯುಐ ಸೇರಿ ಎಲ್ಲ 40 ಪ್ರತಿವಾದಿಗಳಿಗೆ ನಿರ್ದೇಶಿಸಿ, ವಿಚಾರಣೆ ಮುಂದೂಡಿತು.
ಅರ್ಜಿಯಲ್ಲೇನಿದೆ?
ಜ್ಞಾನಭಾರತಿ ಕ್ಯಾಂಪಸ್ ಒಟ್ಟು 1,112 ಎಕರೆ ಪ್ರದೇಶದಲ್ಲಿ ವಿಸ್ತರಿಸಿಕೊಂಡಿದ್ದು, ಅದನ್ನು ನೈಸರ್ಗಿಕ ಭೂಪ್ರದೇಶ ಮತ್ತು ಜೀವವೈವಿಧ್ಯತೆಯ ಸಂರಕ್ಷ ಣೆಯ ಶೈಕ್ಷಣಿಕ ಹಾಗೂ ಪರಿಸರ ಕ್ಯಾಂಪಸ್ ಎಂದು ಭಾವಿಸಲಾಗಿದೆ. ಪಿಎಂ-ಉಷಾ ಯೋಜನೆ, ಅಂಬೇಡ್ಕರ್ ಥೀಮ್ ಪಾರ್ಕ್, ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಕಾಲೇಜು (ಯುವಿಸಿಇ) ಹೊಸ ಕ್ಯಾಂಪಸ್ ಸೇರಿ ವಿವಿಧ ನಿರ್ಮಾಣ ಯೋಜನೆಗಳಿಂದ ಜ್ಞಾನಭಾರತಿ ಕ್ಯಾಂಪಸ್‌ನ ಅರಣ್ಯ ಪ್ರದೇಶ ನಾಶವಾಗುತ್ತಿರುವುದರ ಜತೆಗೆ, ಅಲ್ಲಿನ ಜೀವವೈವಿಧ್ಯತೆ ಅಪಾಯಕ್ಕೆ ಸಿಲುಕುತ್ತಿದೆ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ.
ಬಯೋಪಾರ್ಕ್‌ನಲ್ಲಿ ಔಷಧೀಯ, ಬಿದಿರು, ಚಿಟ್ಟೆ, ಹಣ್ಣು ಸೇರಿ ವಿವಿಧ 16 ಬಗೆಯ ವಲಯಗಳಿವೆ. ಇದು ನಗರದಲ್ಲಿ ಉಳಿದಿರುವ ಕೊನೆಯ ಹಸಿರು ಪ್ರದೇಶವಾಗಿದೆ. ಸಸ್ಯ ಮತ್ತು ಪ್ರಾಣಿ ಸಂಕುಲ, ನೈಸರ್ಗಿಕ ಜಲಮೂಲಗಳನ್ನು ಹೊಂದಿದೆ. ಆದರೆ, ವಿವಿಧ ನಿರ್ಮಾಣ ಯೋಜನೆಗಳ ಹಿನ್ನೆಲೆಯಲ್ಲಿ ಅದು ಅಪಾಯದಲ್ಲಿದೆ. ನೂರಾರು ಮರಗಳನ್ನು ಕಡಿಯುವ ಪ್ರಸ್ತಾವನೆ ಇದೆ. ಆದ್ದರಿಂದ, ಯಾವುದೇ ಯೋಜನೆಗಳಿಗೆ ಭೂಮಿ ನೀಡದಂತೆ ನಿರ್ಬಂಧಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.