×
Ad

500 ಕೋಟಿ ರೂ.ಭೂಮಿಯಲ್ಲಿ ವೃಕ್ಷೋಧ್ಯಾನ : ಈಶ್ವರ್ ಖಂಡ್ರೆ ಚಾಲನೆ

Update: 2024-08-07 21:28 IST

ಬೆಂಗಳೂರು : ರಾಜ್ಯ ರಾಜಧಾನಿಯಲ್ಲಿ ಒತ್ತುವರಿ ತೆರವು ಮಾಡಿಸಲಾದ ಸುಮಾರು 500 ಕೋಟಿ ರೂ.ಬೆಲೆ ಬಾಳುವ ಅರಣ್ಯ ಭೂಮಿಯಲ್ಲಿ ವೃಕ್ಷೋಧ್ಯಾನ ಮತ್ತು ಪಕ್ಷಿಲೋಕ ನಿರ್ಮಿಸಲು ಅರಣ್ಯ ಸಚಿವ ಈಶ್ವರ ಖಂಡ್ರೆ ಚಾಲನೆ ನೀಡಿದ್ದಾರೆ.

ಇಲಾಖೆ ಮರುವಶ ಪಡಿಸಿಕೊಂಡಿರುವ 17 ಎಕರೆ ಜಮೀನಿನ ಖುದ್ದು ಪರಿಶೀಲನೆಗೆ ಬುಧವಾರ ಆಗಮಿಸಿದ್ದ ಅವರು, ಗಿಡ ನೆಡುವ ಮೂಲಕ ವೃಕ್ಷೋಧ್ಯಾನದಲ್ಲಿ 1800 ಸ್ಥಳೀಯ ಪ್ರಭೇದದ ಸಸಿ ನೆಡುವ ಕಾರ್ಯಕ್ರಮಕ್ಕೆ ಹಾಗೂ ಜಮೀನಿನ ಸುತ್ತಲೂ ತಂತಿ ಬೇಲಿ ಹಾಕುವ ಕಾಮಗಾರಿಗೂ ಚಾಲನೆ ನೀಡಿದರು.

ಬೆಂಗಳೂರು ನಗರ ಬೃಹದಾಕಾರವಾಗಿ ಬೆಳೆಯುತ್ತಿದ್ದು, ನಗರ ಪ್ರದೇಶದಲ್ಲಿ ಉಸಿರಾಡಲು ಹಸಿರು ಪ್ರದೇಶ (ಲಂಗ್ ಸ್ಪೇಸ್) ಇರಬೇಕು. ಐಟಿ, ಬಿಟಿ ಕಂಪೆನಿಗಳಿರುವ ಈ ಪ್ರದೇಶ ಕಾಂಕ್ರೀಟ್ ಕಾಡಿನಂತಿದ್ದು, 17 ಎಕರೆಯಲ್ಲಿ ನಿರ್ಮಾಣವಾಗಲಿರುವ ಈ ವೃಕ್ಷೋಧ್ಯಾನ ಬೆಳಗಿನ ವಾಯು ವಿಹಾರಕ್ಕೆ ಬರುವವರಿಗೆ ಮತ್ತು ವಾರಾಂತ್ಯದಲ್ಲಿ ಮಕ್ಕಳು, ಮೊಮ್ಮಕ್ಕಳೊಂದಿಗೆ ಸಮಯ ಕಳೆಯಲು ಮಾಹಿತಿ ಮತ್ತು ಮನರಂಜನೆಯ ತಾಣವಾಗುವಂತೆ ಅಭಿವೃದ್ಧಿ ಪಡಿಸಲಾಗುವುದು ಎಂದರು.

ಇಲ್ಲಿ ಪಕ್ಷಿಲೋಕ ನಿರ್ಮಿಸಲಾಗುವುದು. ಎತ್ತರದ ಬೃಹತ್ ಪಂಜರದೊಳಗೆ ಮರಗಳನ್ನು ಬೆಳೆಸಿ ಅದರಲ್ಲಿ ವಿವಿಧ ಬಗೆಯ ಪಕ್ಷಿಗಳನ್ನು ಬಿಡಲಾಗುವುದು. ಈ ಹಕ್ಕಿಗಳ ಕಲರವ, ಸ್ವಚ್ಛಂದ ಹಾರಾಟವನ್ನು ಸ್ಥಳೀಯರಷ್ಟೇ ಅಲ್ಲ, ಪ್ರವಾಸಿಗರೂ ಕಣ್ತುಂಬಿಕೊಳ್ಳುವಂತೆ ಮಾಡಲಾಗುವುದು ಎಂದು ಈಶ್ವರ ಖಂಡ್ರೆ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News