ಪರಿಶಿಷ್ಟ ಜಾತಿ ಸಮಗ್ರ ಸಮೀಕ್ಷೆಯ ಆಧಾರದಲ್ಲಿ ಜಾತಿ ಪ್ರಮಾಣ ಪತ್ರ ನೀಡಲು ಸಾಧ್ಯವಿಲ್ಲ : ನ್ಯಾ.ಎಚ್.ಎನ್.ನಾಗಮೋಹನ್ ದಾಸ್
ನ್ಯಾ.ಎಚ್.ಎನ್.ನಾಗಮೋಹನ್ ದಾಸ್
ಬೆಂಗಳೂರು : ರಾಜ್ಯದಲ್ಲಿ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿಗೆ ಸಂಬಂಧಿಸಿದಂತೆ ಸಮೀಕ್ಷೆಯನ್ನು ನಡೆಸಲಾಗುತ್ತಿದ್ದು, ಈ ಸಮೀಕ್ಷೆಯ ಆಧಾರದಲ್ಲಿ ಪರಿಶಿಷ್ಟ ಜಾತಿ ಪ್ರಮಾಣ ಪತ್ರವನ್ನು ನೀಡಲು ಸಾಧ್ಯವಿಲ್ಲ ಎಂದು ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಕುರಿತು ರಚಿಸಿದ ಏಕಸದಸ್ಯ ಆಯೋಗದ ಅಧ್ಯಕ್ಷ ನ್ಯಾ.ಎಚ್.ಎನ್.ನಾಗಮೋಹನ್ ದಾಸ್ ಸ್ಪಷ್ಟಪಡಿಸಿದ್ದಾರೆ.
ರವಿವಾರ ಈ ಕುರಿತು ಪ್ರಕಟನೆ ಹೊರಡಿಸಿರುವ ಅವರು, ಪರಿಶಿಷ್ಟ ಜಾತಿ ಸಮಗ್ರ ಸಮೀಕ್ಷೆ-2025ಕ್ಕೂ ಜಾತಿ ಪ್ರಮಾಣ ಪತ್ರ ನೀಡುವುದಕ್ಕೂ ಯಾವುದೇ ಸಂಬಂಧವಿರುವುದಿಲ್ಲ. ಆದುದರಿಂದ ಕರ್ನಾಟಕ ಪರಿಶಿಷ್ಟ ಜಾತಿ ಪಟ್ಟಿಗೆ 101 ಸಮುದಾಯಗಳು ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆಯದೇ ಇದ್ದಲ್ಲಿಯೂ ಸಹ ಸಮೀಕ್ಷೆಯಲ್ಲಿ ನಿಖರ ಮಾಹಿತಿಯನ್ನು ನೀಡಬಹುದು. ಆದರೆ, ಪರಿಶಿಷ್ಟ ಪಂಗಡ ಅಥವಾ ಇತರೇ ಹಿಂದುಳಿದ ವರ್ಗಗಳ ಜಾತಿ ಪ್ರಮಾಣ ಪತ್ರವನ್ನು ಈಗಾಗಲೇ ಪಡೆದಿದ್ದಲ್ಲಿ, ಅಂತಹವರನ್ನು ಸಮೀಕ್ಷೆಯಲ್ಲಿ ಪರಿಶಿಷ್ಟ ಜಾತಿ ಎಂದು ಪರಿಗಣಿಸಲು ಅವಕಾಶವಿಲ್ಲ ಎಂದು ಹೇಳಿದ್ದಾರೆ.
ಕೊಪ್ಪಳ ಹಾಗೂ ಬೀದರ್ ಜಿಲ್ಲಾಧಿಕಾರಿಗಳ ಪತ್ರದಲ್ಲಿ ಗಣತಿದಾರರಿಗೆ ನೀಡಿರುವ ಕೈಪಿಡಿಯಲ್ಲಿನ ಎಫ್‍ಎಕ್ಯೂ 90ರಲ್ಲಿ ಬೇಡ ಜಂಗಮ ಸಮುದಾಯದವರಿಗೆ ಜಾತಿ ಪ್ರಮಾಣ ಪತ್ರದ ಆಧಾರದ ಮೇಲೆ ಸಮೀಕ್ಷೆ ನಡೆಸುವುದು ಎಂದು ತಿಳಿಸಲಾಗಿರುತ್ತದೆ. ಮುಂದುವರೆದು ಎಫ್‍ಎಕ್ಯೂ 31ರಲ್ಲಿ ಜಾತಿ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಪಡೆಯುವ ಅಗತ್ಯವಿಲ್ಲವೆಂದು ತಿಳಿಸಲಾಗಿದ್ದು, ಸಮೀಕ್ಷೆಯಲ್ಲಿ ಎಫ್‍ಎಕ್ಯೂ 90ರಂತೆ ಬೇಡ ಜಂಗಮ ಜಾತಿಯವರ ಜಾತಿ ಪ್ರಮಾಣ ಪತ್ರದ ಆಧಾರದ ಮೇಲೆ ಸಮೀಕ್ಷೆಯನ್ನು ಕೈಗೊಳ್ಳಬೇಕೆ ಎಂಬುದರ ಬಗ್ಗೆ ಸ್ಪಷ್ಟಿಕರಣ ಕೋರಿರುತ್ತಾರೆ.
ಕೈಪಿಡಿಯಲ್ಲಿನ ಪುಟ ಸಂಖ್ಯೆ 83ರಲ್ಲಿ (ಅನುಬಂಧ-4) ಜಿಲ್ಲಾ ಮಟ್ಟದಲ್ಲಿ ನಡೆದ ತರಬೇತಿಗಳಲ್ಲಿ ಕೇಳಿದ ವಿವಿಧ ಪ್ರಶ್ನೆಗಳಿಗೆ ಸ್ಪಷ್ಟಿಕರಣದ ನೀಡುವ ಬಗ್ಗೆ, ನಮೂದಿಸಲಾಗಿದೆ. ಸ್ಪಷ್ಟಿಕರಣಗಳಲ್ಲಿ ಕ್ರ.ಸಂ.90 ರಲ್ಲಿ ನೀಡಿರುವ ಸ್ಪಷ್ಟಿಕರಣವನ್ನು ಕೈ ಬಿಡಲಾಗಿದೆ. ಹಾಗೆಯೇ ಎಫ್‍ಎಕ್ಯೂ 90ರಲ್ಲಿನ ಪ್ರಶ್ನೆಗೆ ಅನುಕ್ರಮ ಸಂಖ್ಯೆ-31 ಮತ್ತು ಅನುಕ್ರಮ ಸಂಖ್ಯೆ 11ರಲ್ಲಿ ಸೂಚಿಸಿರುವಂತೆ ಕ್ರಮವಹಿಸಬೇಕು ಎಂದು ಅವರು ಹೇಳಿದ್ದಾರೆ.