ಎಸ್‍ಸಿ-ಎಸ್‍ಟಿ ಹಾಸ್ಟೆಲ್ ವಿದ್ಯಾರ್ಥಿಗಳ ಭೋಜನ ವೆಚ್ಚ ಹೆಚ್ಚಿಸಲು ಮಾವಳ್ಳಿ ಶಂಕರ್ ಆಗ್ರಹ
ಬೆಂಗಳೂರು : ಎಸ್‍ಸಿ-ಎಸ್‍ಟಿ ವಿದ್ಯಾರ್ಥಿನಿಲಯಗಳಲ್ಲಿ ವಾಸ ಮಾಡುವ ವಿದ್ಯಾರ್ಥಿಗಳ ಭೋಜನಾ ವೆಚ್ಚವನ್ನು ಹೆಚ್ಚಿಸದಿರುವುದು ಸರಿಯಾದ ಕ್ರಮವಲ್ಲ. ಕೂಡಲೇ ಭೋಜನಾ ವೆಚ್ಚವನ್ನು ಹೆಚ್ಚಳ ಮಾಡಬೇಕು. ಜತೆಗೆ ಪರಿಶಿಷ್ಟರ ಉದ್ಯಮಶೀಲತೆಗೆ ಬಜೆಟ್‍ನಲ್ಲಿ ಅನುದಾನ ಒದಗಿಸಬೇಕು ಎಂದು ದಸಂಸ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ಒತ್ತಾಯಿಸಿದ್ದಾರೆ.
ರವಿವಾರ ಈ ಸಂಬಂಧ ಪ್ರಕಟಣೆ ನೀಡಿರುವ ಅವರು, ಎಸ್‍ಸಿಪಿ-ಟಿಎಸ್‍ಪಿ ಯೋಜನೆಯಡಿ ಪರಿಶಿಷ್ಟರ ಕಲ್ಯಾಣಕ್ಕಾಗಿ 44,632ಕೋಟಿ ರೂ.ಒದಗಿಸುವುರು ಸರಿಯಷ್ಟೇ, ಆದರೆ. ಕಳೆದ ಸಾಲಿನಲ್ಲಿ ಈ ಯೋಜನೆ ಸಾಕಷ್ಟು ಹಣ ಗ್ಯಾರೆಂಟಿಗಳಿಗೆ ಬಳಸಿದ್ದು, ಕಾಯ್ದೆಗೆ ವಿರುದ್ಧವಾಗಿದೆ. ಆದ್ದರಿಂದ ಪರಿಶಿಷ್ಟರ ವೈಯಕ್ತಿಕ ಸಬಲೀಕರಣ ಹಾಗೂ ಶಿಕ್ಷಣಕ್ಕೆ ಶೇ.60ರಷ್ಟು ಹಣವನ್ನು ವಿನಿಯೋಗಿಸಬೇಕು. ಪರಿಶಿಷ್ಟರ ಮೇಲಿನ ದೌರ್ಜನ್ಯವನ್ನು ತಡೆಗಟ್ಟಲು ಸ್ಥಾಪಿಸಿರುವ ಡಿಸಿಆರ್‌ಇ ಪೊಲೀಸ್ ಠಾಣೆಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಎಂದು ಕೋರಿದ್ದಾರೆ.
ಬೌದ್ಧರ ಅಭಿವೃದ್ಧಿ ನಿಗಮ ಸ್ಥಾಪನೆ, ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ತಾರತಮ್ಯ ತಡೆಗೆ ‘ರೋಹಿತ್ ವೇಮುಲ ಕಾಯ್ದೆ’ ಜಾರಿ, ಅಂಬೇಡ್ಕರ್ ಭೇಟಿ ಕೊಟ್ಟಿರುವ ಸ್ಥಳಗಳಲ್ಲಿ ಅವರ ಸ್ಮರಣಾರ್ಥ ಭವನ ನಿರ್ಮಾಣ ಹಾಗೂ ಸಿಬಿಎಸ್‍ಇ ಶಾಲೆಗಳನ್ನು ತೆರೆಯುವುದು, ಡಾ.ಸಿದ್ದಲಿಂಗಯ್ಯ ಹಾಗೂ ಡಿ.ಆರ್.ನಾಗರಾಜ್ ಹೆಸರಿನಲ್ಲಿ ಟ್ರಸ್ಟ್ ಸ್ಥಾಪಿಸುವುದು ಹಾಗೂ ದಲಿತ ಚಳುವಳಿ ಅರ್ಧಶತಮಾನದ ಕುರಿತು ಸಾಹಿತ್ಯವನ್ನು ಹೊರ ತರುವುದಾಗಿ ಪ್ರಕಟಿಸುವುದು ಸ್ವಾಗತಾರ್ಹ ಎಂದು ಅವರು ತಿಳಿಸಿದ್ದಾರೆ.