×
Ad

ಸ್ಪೀಕರ್ ವಿರುದ್ಧವೇ ಸಿಡಿದ ಶಾಸಕ ಶರಣಗೌಡ ಕಂದಕೂರ

ಜನಸಂದಣಿ ನಿಯಂತ್ರಣ ಮಸೂದೆ ಮೇಲಿನ ಚರ್ಚೆ ವೇಳೆ ಘಟನೆ

Update: 2025-08-21 12:59 IST

ಬೆಂಗಳೂರು: 'ಮಸೂದೆ ವಿಚಾರವಾಗಿ ಎಷ್ಟು ಬೇಕೋ ಅಷ್ಟೇ ಮಾತನಾಡಿ' ಎಂಬ ಸ್ಪೀಕರ್ ಸೂಚನೆಯಿಂದ ಸಿಡಿಮಿಡಿಗೊಂಡ ಗುರುಮಠಕಲ್ ಜೆಡಿಎಸ್ ಶಾಸಕ ಶರಣಗೌಡ ಕಂದಕೂರ ಅವರು ನೀಡಿದ ವಿಧಾನಸಭಾಧ್ಯಕ್ಷರನ್ನೇ ಗದರಿದ ಘಟನೆ ವಿಧಾನ ಮಂಡಲ ಅಧಿವೇಶನದಲ್ಲಿಂದು ನಡೆಯಿತು.

ಇಂದು ಬೆಳಗ್ಗೆ ಗೃಹಸಚಿವ ಡಾ.ಜಿ.ಪರಮೇಶ್ವರ್ ಮಂಡಿಸಿದ ಜನಸಂದಣಿ ನಿಯಂತ್ರಣ ಮಸೂದೆ ಮೇಲಿನ ಚರ್ಚೆಯ ವೇಳೆ ಈ ಘಟನೆ ನಡೆದಿದೆ.

ಶಾಸಕ ಶರಣಗೌಡ ಕಂದಕೂರ ಮಾತನಾಡುತ್ತಿದ್ದ ವೇಳೆ ಮಸೂದೆ ಬೇಕೇ, ಬೇಡವೇ ಎಂಬ ವಿಚಾರವಾಗಿ ಮಾತ್ರ ಮಾತನಾಡಿ ಎಂದು ಸ್ಪೀಕರ್ ಯು.ಟಿ.ಖಾದರ್ ಸೂಚಿಸಿದರು. ಇದರಿಂದ ಕೋಪಗೊಂಡ ಶರಣಗೌಡ ಕಂದಕೂರ ಅವರು ಸ್ಪೀಕರ್ ರನ್ನೇ ಗದರಿಸಿದರು.

ಬಿಲ್ ಬಗ್ಗೆ ಮಾತನಾಡುವುದು ಬೇಡ ಅನ್ನುವುದಾದರೆ ಕುಳಿತುಕೊಳ್ಳುತ್ತೇನೆ ಎಂದು ಶರಣಗೌಡ ಹೇಳಿದಾಗ, ಬಿಲ್ ಗೆ ಸಂಬಂಧಿಸಿದ ವಿಚಾರವನ್ನು ಮಾತ್ರ ಮಾತನಾಡಿ, ಹಳೆ ಸ್ಟೋರಿಗಳನ್ನೆಲ್ಲ ಹೇಳುತ್ತಾ ಬಂದರೆ ಎಷ್ಟು ಜನರಿಗೆ ಇವತ್ತು ಮಾತನಾಡಲು ಸಾಧ್ಯ ಎಂದು ಸ್ಪೀಕರ್ ಹೇಳಿದರು. ಇದರಿಂದ ಕೋಪಗೊಂಡ ಶರಣಗೌಡ, ನಾನಿಲ್ಲಿ ಸಂಬಂಧ ಮಾತಾಡ್ತಾ ಇಲ್ಲ, ಪ್ರತೀ ಸಲ ನನ್ನನ್ನು ಟಾರ್ಗೆಟ್ ಮಾಡುತ್ತಾ ಇದ್ದೀರಿ ಎಂದು ಆರೋಪಿಸಿದರು.

ಪ್ರತೀ ಸಲ ನಾನು ಮಾತನಾಡುವಾಗಲೆಲ್ಲಾ ಬಾಯಿಮುಚ್ಚಿಸುವ ಕೆಲಸ ಮಾಡುತ್ತಾ ಇದ್ದೀರಿ, ನನ್ನ ಮಾತನ್ನು ಹತ್ತಿಕ್ಕುವ ಕೆಲಸ ಮಾಡುತ್ತೀದ್ದೀರಿ ಎಂದು ಕೋಪದಿಂದ ನುಡಿದರು.

ಇದರಿಂದ ಒಂದಿಷ್ಟು ಗರಂ ಆದ ಸ್ಪೀಕರ್, ಮಸೂದೆಗೆ ಸಂಬಂಧಪಟ್ಟ ವಿಚಾರವನ್ನು ಮಾತ್ರ ಮಾತನಾಡಿ, ಹೊರಗೆ ಹೋಗುವುದಾದರೂ ಹೋಗಿ ಎಂದು ಖಡಕ್ ಆಗಿ ಹೇಳಿದರು.

ಮಸೂದೆ ಬೇಕೇ, ಬೇಡವೇ? ಬೇಡ ಅನ್ನುವುದಾದರೆ ಯಾಕೆ ಬೇಡ ಅನ್ನುವುದನ್ನು ಮಾತನಾಡಿ. ಅದು ಬಿಟ್ಟು ಉದಾಹರಣೆಗಳನ್ನೆಲ್ಲಾ ಕೊಡುತ್ತಾ ಹೋದರೆ ಆಗದು. ಇನ್ನೂ ನಾಲ್ಕು ಬಿಲ್ ಮಂಡನೆ ಆಗಬೇಕಿದೆ ಎಂದು ಸ್ಪೀಕರ್ ಹೇಳಿದರು.

ಬಳಿಕ ಶರಣಗೌಡ ಕಂದಕೂರ ಅವರಿಗೆ ಮಾತು ಮುಂದುವರಿಸಲು ಸ್ಪೀಕರ್ ಅವಕಾಶ ಕಲ್ಪಿಸಿದರು. ಅದರಂತೆ ಒಂದೆರಡು ವಾಕ್ಯದಲ್ಲಿ ಅವರು ಮಾತು ಮುಗಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News