ಸಿದ್ದರಾಮಯ್ಯ ಹೆಸರಿಗೆ ಮಸಿ ಬಳಿಯಲು ಯತ್ನಿಸಿದ ಬಿಜೆಪಿ-ಜೆಡಿಎಸ್‌ಗೆ ಮುಖಭಂಗ : ಎಂ.ಲಕ್ಷ್ಮಣ್
ಮೈಸೂರು : ಮುಡಾ ವಿಷಯ ಮುಂದಿಟ್ಟುಕೊಂಡು ಸ್ನೇಹಮಯಿ ಕೃಷ್ಣ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರಿಗೆ ಮಸಿ ಬಳಿಯಲು ಯತ್ನಿಸಿದ್ದ ಬಿಜೆಪಿ ಮತ್ತು ಜೆಡಿಎಸ್‌ಗೆ ಲೋಕಾಯುಕ್ತ ವರದಿಯಿಂದ ಮುಖಭಂಗವಾಗಿದೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಹೇಳಿದರು.
ಬುಧವಾರ ಸಂಜೆ ಮುಡಾ ಕಚೇರಿ ಎದುರು ಸತ್ಯಮೇವ ಜಯತೆ ಫ್ಲೆಕ್ಸ್ ಹಿಡಿದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಡಾದಲ್ಲಿ ಬದಲಿ ನಿವೇಶನಗಳ ಅಕ್ರಮ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸಲ್ಲಿಸಿದ್ದ ದೂರಿಗೆ ಸಾಕ್ಷ್ಯಧಾರಗಳ ಕೊರತೆ ಇದೆ ಎಂದು ಲೋಕಾಯುಕ್ತ ಅಧಿಕಾರಿಗಳು ಹೇಳಿರುವುದು ಸ್ವಾಗತಾರ್ಹ ಬೆಳವಣಿಗೆಯಾಗಿದೆ ಎಂದು ಹೇಳಿದರು.
ನಾವು ಈ ಪ್ರಕರಣ ಸಂಬಂಧ ರಾಜ್ಯಪಾಲರು ತನಿಖೆಗೆ ಆದೇಶ ಮಾಡಿದ ಮೊದಲ ದಿನದಿಂದಲೇ ಇದರಲ್ಲಿ ಯಾವುದೇ ಸತ್ಯಾಂಶವಿಲ್ಲ. ಕೇವಲ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬೆದರಿಸಲು, ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಮತ್ತು ಜೆಡಿಎಸ್ ಬಾಡಿಗೆ ಕಲಾವಿದರ ಮೂಲಕ ಹೂಡಿದ ಸಂಚು ಎಂದು ಹೇಳುತ್ತಲೇ ಬಂದಿದ್ದೇವೆ. ಇದೀಗ ಸತ್ಯಾಂಶ ಬಯಲಾಗಿದೆ. ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ ಆದಿಯಾಗಿ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಬೆಂಗಳೂರಿನಿಂದ ಮೈಸೂರಿಗೆ ಯಾರಿಗೂ ಉಪಯೋಗವಾಗದ ವ್ಯರ್ಥ ಪಾದಯಾತ್ರೆ ಮಾಡಿದರು ಎಂದು ಲಕ್ಷ್ಮಣ್ ವ್ಯಂಗ್ಯವಾಡಿದರು.
ಲೋಕಾಯುಕ್ತ ತನಿಖಾಧಿಕಾರಿ ಉದೇಶ್ ಅವರು ದೂರುದಾರ ಸ್ನೇಹಮಯಿ ಕೃಷ್ಣ ಅವರಿಗೆ ನೀಡಿರುವ ನೋಟಿಸ್‌ನಲ್ಲಿ ಇದೊಂದು ಸಿವಿಲ್ ಸ್ವರೂಪದ ಪ್ರಕರಣ, ಸಾಕ್ಷ್ಯಾಧಾರಗಳ ಕೊರತೆ ಇದೆ, ತನಿಖೆ ನಡೆಸಲು ತಕ್ಕುದ್ದಲ್ಲ, ಕಾನೂನಿನ ತಪ್ಪು ತಿಳುವಳಿಕೆಯಿಂದ ದೂರು ನೀಡಲಾಗಿದೆ. ಕ್ರಮ ಜರುಗಿಸತಕ್ಕದ್ದಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಇದನ್ನು ಸ್ನೇಹಮಯಿ ಕೃಷ್ಣ ಗೌರವಿಸುವದನ್ನು ಬಿಟ್ಟು ತನಿಖಾಧಿಕಾರಿ ವಿರುದ್ಧವೇ ಹೇಳಿಕೆ ನೀಡಿದ್ದಾರೆ. ಇವರ ವಿರುದ್ಧ ತನಿಖಾಧಿಕಾರಿಗಳು ದೂರು ದಾಖಲಿಸಬೇಕು ಎಂದರು.
ಲೋಕಾಯುಕ್ತ ಒಂದು ಸ್ವಾಯುತ್ತ ಸಂಸ್ಥೆಯಾಗಿದೆ. ರಾಜ್ಯಪಾಲರೇ ತನಿಖೆಗೆ ಆದೇಶಿಸಿದ್ದಾರೆ, ಆದಾಗ್ಯೂ ತನಿಖಾ ವರದಿಯನ್ನು ದೂರುದಾರರು ಗೌರವಿಸುತ್ತಿಲ್ಲ. ಇನ್ನು ಮುಂದಾದರೂ ಕೃಷ್ಣ ಅವರು ಸುಳ್ಳು ಆರೋಪಗಳನ್ನು ಮಡುವುದನ್ನು ಬಿಟ್ಟು ನ್ಯಾಯಯುತವಾಗಿ ಹೋರಾಟ ಮಾಡಲಿ ಎಂದು ಸಲಹೆ ನೀಡಿದರು.
ಇದೇ ವೇಳೆ ಜಿಲ್ಲಾ ಮಾಧ್ಯಮ ವಕ್ತಾರ ಕೆ.ಮಹೇಶ್ ಜೊತೆಯಲ್ಲಿದ್ದರು.