‘ಒಳ ಮೀಸಲಾತಿ’ ಜಾರಿಗೊಳಿಸುವ ದಿನಾಂಕ ಪ್ರಕಟಿಸಿ: ಸಂಸದ ಗೋವಿಂದ ಕಾರಜೋಳ ಆಗ್ರಹ
ಗೋವಿಂದ ಎಂ.ಕಾರಜೋಳ
ಬೆಂಗಳೂರು : ‘ಪರಿಶಿಷ್ಟ ಜಾತಿ ಒಳ ಮೀಸಲಾತಿ ಕಲ್ಪಿಸುವ ಸಂಬಂಧ ನ್ಯಾ.ನಾಗಮೋಹನ್ ದಾಸ್ ಆಯೋಗ ಕೈಗೊಳ್ಳಲಿರುವ ಸಮೀಕ್ಷೆಯ ಬಗ್ಗೆ ವಿಶ್ವಾಸ ಮೂಡಿಸಲು ರಾಜ್ಯ ಸರಕಾರ ಒಳ ಮೀಸಲಾತಿ ಜಾರಿ ಕುರಿತು ದಿನಾಂಕ ಪ್ರಕಟಿಸಬೇಕು’ ಎಂದು ಸಂಸದ ಗೋವಿಂದ ಎಂ.ಕಾರಜೋಳ ಆಗ್ರಹಿಸಿದ್ದಾರೆ.
ಶನಿವಾರ ಇಲ್ಲಿನ ಬಿಜೆಪಿ ಕಾರ್ಯಾಲಯದಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಶಿಷ್ಟ ಜಾತಿ ಸಮೀಕ್ಷೆ ಕಾರ್ಯವು ಮೇ 20ಕ್ಕೆ ಪೂರ್ಣಗೊಳ್ಳಲಿದೆ. ತಂತ್ರಜ್ಞಾನದ ನೆರವಿನಿಂದ ಸಮೀಕ್ಷೆ ಕೈಗೊಳ್ಳಲಿರುವ ಹಿನ್ನೆಲೆಯಲ್ಲಿ ಕೆಲವೇ ದಿನಗಳಲ್ಲಿ ವರದಿಯು ಸಿದ್ಧವಾಗುತ್ತದೆ. ಹೀಗಾಗಿ, ಸಮೀಕ್ಷೆಯಲ್ಲಿ ಎಲ್ಲರೂ ಉತ್ಸಾಹದಿಂದ ಪಾಲ್ಗೊಳ್ಳಲು ಮೀಸಲಾತಿ ಜಾರಿ ಸಂಬಂಧ ದಿನಾಂಕ ಪ್ರಕಟಿಸಬೇಕು ಎಂದರು.
ಸರಕಾರ ಈಗಾಗಲೇ ಈ ಹಿಂದೆ ನಡೆಸಿದ್ದ ಸಾಮಾಜಿಕ, ಆರ್ಥಿಕ ಸಮೀಕ್ಷಾ (ಜಾತಿ ಗಣತಿ) ವರದಿಯನ್ನು ಸಂಪುಟದಲ್ಲಿ ಮಂಡಿಸಿದೆ. ಕಾಂತರಾಜ್ ಆಯೋಗದ ವರದಿಯಲ್ಲಿನ ಪರಿಶಿಷ್ಟ ಜಾತಿಯ ದತ್ತಾಂಶದ ಬಗ್ಗೆ ಸಚಿವರಾದ ಡಾ.ಮಹದೇವಪ್ಪ, ಡಾ.ಜಿ.ಪರಮೇಶ್ವರ್, ಪ್ರಿಯಾಂಕ ಖರ್ಗೆ, ಕೆ.ಎಚ್.ಮುನಿಯಪ್ಪ, ಆರ್.ಬಿ.ತಿಮ್ಮಾಪುರ ವಿರೋಧಿಸಿಲ್ಲ. ಆ ದತ್ತಾಂಶಗಳು ಪರಿಶಿಷ್ಟರ 101 ಜಾತಿಗಳ ಜನಸಂಖ್ಯೆ ಬಗ್ಗೆ ಏನನ್ನು ಹೇಳುತ್ತದೆ? ಎಂದು ಕಾರಜೋಳ ಇದೇ ವೇಳೆ ಪ್ರಶ್ನಿಸಿದರು.
ಪರಿಶಿಷ್ಟ ಜಾತಿ ಒಳ ಮೀಸಲಾತಿಗೆ ಆಗ್ರಹಿಸಿ ಮೂವತ್ತು ವರ್ಷಗಳಿಂದ ಹೋರಾಟ ನಡೆಸಲಾಗುತ್ತಿದ್ದು, ಸಮುದಾಯದಲ್ಲಿ ವ್ಯಾಪಕವಾಗಿ ಚರ್ಚೆ ಆಗುತ್ತಿದೆ. ಈಗಾಗಲೇ ಸುಪ್ರೀಂ ಕೋರ್ಟ್ ತೀಪಿನ ಬಳಿಕ ಕೆಲ ರಾಜ್ಯಗಳಲ್ಲಿ ಒಳ ಮೀಸಲಾತಿ ಜಾರಿ ಮಾಡಲಾಗಿದೆ. ಹೀಗಾಗಿ ರಾಜ್ಯ ಸರಕಾರ ಒಳ ಮೀಸಲಾತಿ ತ್ವರಿತ ಜಾರಿಗೆ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದರು. ಈ ವೇಳೆ ಕೇಂದ್ರದ ಮಾಜಿ ಸಚಿವ ಎ. ನಾರಾಯಣಸ್ವಾಮಿ ಹಾಜರಿದ್ದರು.