×
Ad

ಬೆಂಗಳೂರು | ವಕೀಲರೊಬ್ಬರ ಮೃತದೇಹ ಪತ್ತೆ: ಪ್ರಕರಣ ದಾಖಲು

Update: 2025-05-03 22:07 IST

ಬೆಂಗಳೂರು : ಇಲ್ಲಿನ ಬನ್ನೇರುಘಟ್ಟ-ಕನಕಪುರ ಮಾರ್ಗದ ನೈಸ್‍ರಸ್ತೆಯಲ್ಲಿ ವಕೀಲರೊಬ್ಬರ ಮೃತದೇಹ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿರುವ ಘಟನೆ ಮೇ 2ರಂದು ವರದಿಯಾಗಿದೆ.

ಈ ಮೃತದೇಹವು ವಕೀಲ ಜಗದೀಶ್ ಎಂಬುವವರದ್ದಾಗಿದೆ ಎಂದು ಪತ್ತೆ ಹಚ್ಚಲಾಗಿದ್ದು, ಈ ಸಂಬಂಧ ಕೆಂಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಂಡ್ಯ ಜಿಲ್ಲೆಯ ಮಳವಳ್ಳಿ ಮೂಲದ ಜಗದೀಶ್ ಬೆಂಗಳೂರಿನ ಉಲ್ಲಾಳದಲ್ಲಿ ವಾಸವಿದ್ದರು. ಮೇ 2ರ ಶುಕ್ರವಾರ ಜಗದೀಶ್ ಅವರು ತೆರಳುತ್ತಿದ್ದ ಕಾರಿನಿಂದ 100 ಮೀಟರ್ ದೂರದಲ್ಲಿ ಅವರ ಮೃತದೇಹ ಪತ್ತೆಯಾಗಿದೆ. ಕಾರಿನ ಒಂದೆರಡು ಕಡೆಗಳಲ್ಲಿ ಸಣ್ಣ ಪ್ರಮಾಣದ ಅಪಘಾತವಾದ ಗುರುತುಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ರಸ್ತೆ ಪಕ್ಕದಲ್ಲಿ ಮೃತದೇಹ ಪತ್ತೆಯಾದ ಬಗ್ಗೆ ಶುಕ್ರವಾರ ಸಂಜೆ 7:50ರ ಸುಮಾರಿಗೆ ಪೊಲೀಸ್ ನಿಯಂತ್ರಣ ಕೋಣೆಗೆ ಕರೆ ಬಂದಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ ರಸ್ತೆ ಪಕ್ಕದಲ್ಲಿ ಕಾರು ನಿಂತಿದ್ದು, ಪಾರ್ಕಿಂಗ್ ಲೈಟ್ ಆನ್ ಇತ್ತು. ಕಾರಿನಿಂದ 100 ಮೀಟರ್ ದೂರದಲ್ಲಿ ಮೃತದೇಹ ಪತ್ತೆಯಾಗಿದ್ದು, ಯಾವುದೇ ಹಲ್ಲೆಯ ಗುರುತುಗಳು ಪತ್ತೆಯಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಕಾರಿನ ಎರಡು ಕಡೆಗಳಲ್ಲಿ ಅಪಘಾತದ ಗುರುತುಗಳಿವೆ. ಮೃತರ ಸಂಬಂಧಿಕರು ನೀಡಿರುವ ದೂರಿನನ್ವಯ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಪಶ್ಚಿಮ ವಿಭಾಗದ ಡಿಸಿಪಿ ಎಸ್.ಗಿರೀಶ್ ಅವರ ನೇತೃತ್ವದಲ್ಲಿ ತನಿಖಾ ತಂಡ ರಚಿಸಲಾಗಿದೆ ಎಂದು ಬೆಂಗಳೂರು ಪಶ್ಚಿಮ ವಲಯದ ಹೆಚ್ಚುವರಿ ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News