×
Ad

ಕನ್ನಡ ಮಾಧ್ಯಮ ಅಭ್ಯರ್ಥಿಗಳೆಂದರೆ ಯಾಕಿಷ್ಟು ಅಸಡ್ಡೆ?: ಆರ್.ಅಶೋಕ್

Update: 2025-05-04 18:16 IST

ಬೆಂಗಳೂರು : ‘ಮುಖ್ಯಮಂತ್ರಿ ಸಿದ್ದರಾಮಯ್ಯನವರೇ, ಗ್ರಾಮೀಣ ಭಾಗದ ಕನ್ನಡ ಮಾಧ್ಯಮ ಅಭ್ಯರ್ಥಿಗಳು ಅಂದರೆ ತಮಗೆ ಯಾಕಿಷ್ಟು ದ್ವೇಷ? ಅಸಡ್ಡೆ? ಬಡವರು ಮಕ್ಕಳು ಮುಂದೆ ಬರಬಾರದೇ?’ ಎಂದು ವಿಧಾನಸಭೆಯ ವಿರೋಧ ಪಕ್ಷ ನಾಯಕ ಆರ್.ಅಶೋಕ್ ಖಾರವಾಗಿ ಪ್ರಶ್ನೆ ಮಾಡಿದ್ದಾರೆ.

ರವಿವಾರ ಎಕ್ಸ್‌ ನಲ್ಲಿ ಪೋಸ್ಟ್ ಹಾಕಿರುವ ಅವರು, ‘ವಿಧಾನಸಭೆ ಅಧಿವೇಶನದಲ್ಲಿ ಕನ್ನಡ ಮಾಧ್ಯಮ ಅಭ್ಯರ್ಥಿಗಳ ಹಿತಾಸಕ್ತಿ ಕಾಪಡುವುದಾಗಿ ತಾವು ಕೊಟ್ಟ ಮಾತಿನಂತೆ ನಡೆದುಕೊಳ್ಳಲಿಲ್ಲ. ಬೇರೆ ದಾರಿ ಇಲ್ಲದೆ ಅಭ್ಯರ್ಥಿಗಳು ಕೋರ್ಟ್ ಮೊರೆ ಹೋಗಿ ಆದೇಶ ತಂದರೆ ಹಾಲ್ ಟಿಕೆಟ್ ಕೊಡಲು ಸತಾಯಿಸಿ ನೆಮ್ಮದಿಯಾಗಿ ಪರೀಕ್ಷೆ ಬರೆಯಲೂ ತೊಂದರೆ ಮಾಡಿದ್ದೀರಿ. ನೂರಾರು ಕನಸುಗಳನ್ನು ಇಟ್ಟುಕೊಂಡು ಹಗಲು ರಾತ್ರಿ ಎನ್ನದೆ ವರ್ಷಗಟ್ಟಲೆ ತಯಾರಿ ನಡೆಸಿದ ಅಭ್ಯರ್ಥಿಗಳ ಶಾಪ ನಿಮ್ಮ ಸರಕಾರಕ್ಕೆ ತಟ್ಟದೇ ಇರದು ಎಂದು ಟೀಕಿಸಿದ್ದಾರೆ.

ಕೆಪಿಎಸ್ಸಿ ಅನ್ಯಾಯದ ವಿರುದ್ಧ ಕೋರ್ಟ್ ಮೆಟ್ಟಲೇರಿದ್ದ ಅಭ್ಯರ್ಥಿಗಳ ಮೇಲೆ ಸೇಡು ತೀರಿಸಿಕೊಳ್ಳುತ್ತಿದೆ ಈ ಪಾಪಿ ಕಾಂಗ್ರೆಸ್ ಸರಕಾರ. ಕೆಪಿಎಸ್ಸಿ ಪೂರ್ವಭಾವಿ ಪರೀಕ್ಷೆಯಲ್ಲಿನ ಭಾಷಾಂತರ ಎಡವಟ್ಟಿನಿಂದ ಅನ್ಯಾಯಕ್ಕೊಳಗಾಗಿದ್ದ ಅಭ್ಯರ್ಥಿಗಳು ಹೈಕೋರ್ಟ್ ಮೊರೆ ಹೋಗಿ, ಮೇ 3ರಿಂದ ಆರಂಭವಾಗುವ ಮುಖ್ಯ ಪರೀಕ್ಷೆಯನ್ನು ತೆಗೆದುಕೊಳ್ಳುವ ಅನುಮತಿ ಪಡೆದಿದ್ದರೆ, ಅವರಿಗೆ ಹಾಲ್ ಟಿಕೆಟ್ ಕೊಡಲು ಸತಾಯಿಸಿ ಸೇಡು ತೀರಿಸಿಕೊಳ್ಳುತ್ತಿದೆ ಈ ಪಾಪಿ ಕಾಂಗ್ರೆಸ್ ಸರಕಾರ ಎಂದು ವಾಗ್ದಾಳಿ ನಡೆಸಿದ್ದಾರೆ.

‘ಒಂದು ಕಡೆ ಧೋ ಎಂದು ಸುರಿಯುತ್ತಿರುವ ಮಳೆ, ಮತ್ತೊಂದು ಕಡೆ ಅರ್ಜಿ ತುಂಬಲು ಯಾವ ದಾಖಲಾತಿಗಳು ಬೇಕೆ ಎನ್ನುವ ಗೊಂದಲ, ಹತ್ತಿರದಲ್ಲಿ ಒಂದು ಜೆರಾಕ್ಸ್ ಅಂಗಡಿ ಇಲ್ಲ, ಕುಡಿಯೋಕೆ ನೀರಿಲ್ಲ, ಕಾಫಿ ತಿಂಡಿಗೆ ಒಂದು ಹೋಟೆಲ್ ಇಲ್ಲ, ಹೆಣ್ಣುಮಕ್ಕಳಿಗೆ ಶೌಚಾಲಯವಿಲ್ಲ, ಹಸುಗೂಸುಗಳಿಗೆ ಹಾಲುಣಿಸೋಕೆ ಜಾಗ ಇಲ್ಲ, ಮಧ್ಯರಾತ್ರಿಯಾದರೂ ಹಾಲ್ ಟಿಕೆಟ್ ಕೈಗೆ ಸಿಕ್ಕಿಲ್ಲ, ಬೆಳಗಾದರೆ ಪರೀಕ್ಷೆ, ಇಂತಹ ಅವಾಂತರದ ನಡುವೆ ಪಾಪ ಅಭ್ಯರ್ಥಿಗಳು ಪರೀಕ್ಷೆ ಬರೆಯುವುದಾದರೂ ಹೇಗೆ?’ ಎಂದು ಅವರು ಕೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News