‘ಚುನಾವಣೆಯಲ್ಲಿ ಅಂಬೇಡ್ಕರ್ ಸೋಲಿಗೆ ಸಾವರ್ಕರ್ ಕಾರಣವೆಂದ ಕಾಂಗ್ರೆಸ್’ ; ಆರೋಪ ಸಾಬೀತುಪಡಿಸಿದರೆ ರಾಜಕೀಯ ನಿವೃತ್ತಿ : ಛಲವಾದಿ ನಾರಾಯಣಸ್ವಾಮಿ
ಬೆಂಗಳೂರು : ‘ಚುನಾವಣೆಯಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಕಾಂಗ್ರೆಸ್ ಸೋಲಿಸಿಲ್ಲ. ಅವರನ್ನು ಸೋಲಿಸಿದ್ದು ಕಮ್ಯುನಿಸ್ಟ್ ಪಕ್ಷದ ಡಾಂಗೆ ಮತ್ತು ಆರೆಸ್ಸೆಸ್‌ನ ಸಾವರ್ಕರ್’ ಎಂದು ಕಾಂಗ್ರೆಸ್ ನಾಯಕರು ಮಾಡಿರುವ ಆರೋಪವನ್ನು ಸಾಬೀತುಪಡಿಸಿದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ರಾಜಕೀಯದಿಂದಲೇ ನಿವೃತ್ತಿ ಪಡೆಯುತ್ತೇನೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಸವಾಲು ಹಾಕಿದ್ದಾರೆ.
ರವಿವಾರ ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಜ್ಯಸಭಾ ಸದಸ್ಯ ಜಯರಾಮ್ ರಮೇಶ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಪ್ರಿಯಾಂಕ್ ಖರ್ಗೆ ಈ ಬಗ್ಗೆ ಮಾಡಿರುವ ಆರೋಪವನ್ನು ಸಾಬೀತುಪಡಿಸಿದರೆ ಒಂದು ಲಕ್ಷದ ಒಂದು ರೂಪಾಯಿಯನ್ನು ಬಹುಮಾನವಾಗಿ ನೀಡುತ್ತೇನೆ ಎಂದು ಹೇಳಿದರು.
ಒಂದು ವೇಳೆ ಆರೋಪ ಸಾಬೀತುಪಡಿಸುವಲ್ಲಿ ವಿಫಲರಾದರೆ ಈ ನಾಲ್ವರು ಮುಖಂಡರು ತಮ್ಮ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ರಾಜಕೀಯದಿಂದ ನಿವೃತ್ತಿ ಪಡೆಯಲು ಸಿದ್ಧರಿದ್ದಾರೆಯೇ? ಎಂದು ಪ್ರಶ್ನಿಸಿದ ನಾರಾಯಣಸ್ವಾಮಿ, ಮಲ್ಲಿಕಾರ್ಜುನ ಖರ್ಗೆ ಮತ್ತು ಅವರ ಮಗ ಡಬಲ್ ಇಂಜಿನ್ ಸುಳ್ಳುಗಾರರು. ಇಂತಹ ಖರ್ಗೆಗಳಿಂದ ಬಾಬಾಸಾಹೇಬ್ ಮತ್ತು ದಲಿತರಿಗೆ ಅನ್ಯಾಯವಾಗಿದೆ ಎಂದು ಆರೋಪಿಸಿದರು.
ಈ ದೇಶದ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸಂವಿಧಾನ ಸಾವಿರ ವರ್ಷಗಳ ಹಿಂದೆ ಬಂದಿದೆ ಎಂದು ಹೇಳಿಕೆ ನೀಡುತ್ತಾರೆ. ಅವರ ವಿರುದ್ಧ ಕಾಂಗ್ರೆಸ್ ನಾಯಕರು ಮಾತನಾಡದಿರುವುದು ಸಂವಿಧಾನ ಮತ್ತು ಬಾಬಾಸಾಹೇಬರಿಗೆ ಅಪಚಾರ ಎಸಗಿದಂತೆ ಎಂದು ಅವರು ಹೇಳಿದರು.
ಮೀಸಲಾತಿಗೆ ಬಿಜೆಪಿ ಮತ್ತು ಆರೆಸ್ಸೆಸ್ ವಿರೋಧವಿತ್ತು ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಆದರೆ, ದೇಶದಲ್ಲಿ ಸಮಾನತೆ ಬರುವವರೆಗೆ ಮೀಸಲಾತಿ ಇರಬೇಕು ಎಂದು ಆರೆಸ್ಸೆಸ್ ಹೇಳುತ್ತದೆ. ಕರ್ನಾಟಕದಲ್ಲಿ ಪರಿಶಿಷ್ಟ ಜಾತಿಯ ಮೀಸಲಾತಿಯನ್ನು ಹೆಚ್ಚಿಸಿದ್ದು ಯಾರು? ಎಂದು ಪ್ರಶ್ನಿಸಿದ ನಾರಾಯಣಸ್ವಾಮಿ, ಒಳಮೀಸಲಾತಿಯನ್ನು ಜಾರಿಗೆ ತರಲು ನಿಮಗೆ ಯೋಗ್ಯತೆ ಇಲ್ಲ. ಇನ್ನೂ ಮೀನಮೇಷ ಮಾಡುತ್ತಿದ್ದೀರಿ ಎಂದು ಆರೋಪಿಸಿದರು.