×
Ad

ನಾಳೆಯಿಂದ ಪರಿಶಿಷ್ಟ ಜಾತಿಗಳ ‘ಒಳ ಮೀಸಲಾತಿ’ಗೆ ಸಮೀಕ್ಷೆ ಆರಂಭ

Update: 2025-05-04 23:56 IST

ಸಾಂದರ್ಭಿಕ ಚಿತ್ರ | PC: Grok

ಬೆಂಗಳೂರು : ಪರಿಶಿಷ್ಟ ಜಾತಿಗಳ ಒಳಮೀಸಲಾತಿ ವರ್ಗೀಕರಣಕ್ಕೆ ಸಂಬಂಧಿಸಿದಂತೆ ರಾಜ್ಯಾದ್ಯಂತ ನಾಳೆಯಿಂದ (ಮೇ 5) ಮೇ 23ರ ವರೆಗೆ ಸಮೀಕ್ಷೆಯನ್ನು ನಡೆಸಲಾಗುತ್ತಿದ್ದು, ರಾಜ್ಯ ಸರಕಾರವು ಈಗಾಗಲೇ ಸಮೀಕ್ಷೆಗೆ ಸಕಲ ಸಿದ್ದತೆಗಳನ್ನು ಮಾಡಿಕೊಂಡಿದೆ.

ಸರಕಾರವು ಒಳಮೀಸಲಾತಿ ಜಾರಿ ಮಾಡಲು ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್ ಅಧ್ಯಕ್ಷತೆಯಲ್ಲಿನ ಏಕಸದಸ್ಯ ವಿಚಾರಣಾ ಆಯೋಗವನ್ನು ನೇಮಿಸಿದ್ದು, ಆಯೋಗದ ನಿರ್ಣಯದಂತೆ ಪರಿಶಿಷ್ಟ ಜಾತಿ ಒಳಮೀಸಲಾತಿ ಕಲ್ಪಿಸಲು ಅವಶ್ಯವಿರುವ ದತ್ತಾಂಶ ಸಂಗ್ರಹಿಸಲು ಸಮೀಕ್ಷೆ ನಡೆಸುತ್ತಿದೆ.

ಸಮೀಕ್ಷೆಯನ್ನು ಮೂರು ಹಂತಗಳಲ್ಲಿ ಕೈಗೊಳ್ಳಲಾಗುತ್ತಿದ್ದು, ಮೊದಲ ಹಂತದಲ್ಲಿ ಮೇ 5ರಿಂದ ಮೇ 17ರ ವರೆಗೆ ಗಣತಿದಾರರು ಮನೆ-ಮನೆಗೆ ಭೇಟಿ ನೀಡಿ ಸಮೀಕ್ಷೆ ಕೈಗೊಳ್ಳಲಾಗುತ್ತದೆ. ಎರಡನೇ ಹಂತದಲ್ಲಿ ಮೇ 19ರಿಂದ ಮೇ 21ರ ವರೆಗೆ ಮತಗಟ್ಟೆ ಪ್ರದೇಶವಾರು ವಿಶೇಷ ಶಿಬಿರಗಳಲ್ಲಿ ಸಮೀಕ್ಷೆ ನಡೆಸಲಾಗುತ್ತದೆ. ಮೂರನೇ ಹಂತದಲ್ಲಿ ಮೇ 19ರಿಂದ ಮೇ 23ರ ವರೆಗೆ ಆನ್‍ಲೈನ್ ಸ್ವಯಂ ಘೋಷಣೆ ಮೂಲಕ ಸಮೀಕ್ಷೆಯನ್ನು ಮಾಡಲಾಗುತ್ತದೆ.

ಸಮೀಕ್ಷೆಗೆ ಕಡ್ಡಾಯವಾಗಿ ಶಿಕ್ಷಕರನ್ನು ಗಣತಿದಾರರನ್ನಾಗಿ ನೇಮಕ ಮಾಡಲಾಗಿದೆ. ಎಲ್ಲ ಜಿಲ್ಲೆಗಳಲ್ಲಿ ಪ್ರತೀ 10 ರಿಂದ 12 ಗಣತಿದಾರರಿಗೆ ಒಬ್ಬರಂತೆ ಮೇಲ್ವಿಚಾರಕರನ್ನು ನೇಮಕ ಮಾಡಲಾಗಿದೆ. ಜಿಲ್ಲೆಗಳಲ್ಲಿ ಮೂರು ಮಂದಿ ಜಿಲ್ಲಾ ಮಟ್ಟದ ಮಾಸ್ಟರ್ ಟ್ರೈನರ್‍ಗಳನ್ನು ಗುರುತಿಸಿ ನೇಮಕ ಮಾಡಬೇಕು. ಬಿಬಿಎಂಪಿ ವ್ಯಾಪ್ತಿಯಲ್ಲಿ ವಾರ್ಡ್‍ಗಳಿಗೆ ಅನುಗುಣವಾಗಿ ಮಾಸ್ಟರ್ ಟ್ರೈನರ್‍ಗಳನ್ನು ಗುರುತಿಸಿ ನೇಮಕ ಮಾಡಲಾಗಿದ್ದು, ಎಲ್ಲರಿಗೂ ಅಗತ್ಯ ತರಬೇತಿಯನ್ನು ನೀಡಲಾಗಿದೆ.

‘ರಾಜ್ಯ ಸರಕಾರವು ಸೇರಿದಂತೆ ಪರಿಶಿಷ್ಟ ಜಾತಿಯ ವಿವಿಧ ಸಂಘಟನೆಗಳು ಸಮುದಾಯದ ಜನರು ಸಮೀಕ್ಷೆಯಲ್ಲಿ ಭಾಗವಹಿಸುವಂತೆ ವ್ಯಾಪಕ ಪ್ರಚಾರವನ್ನು ನಡೆಸಲಾಗಿದೆ. ಸಾಮಾಜಿಕ ಜಾಲತಾಣ ಸೇರಿದಂತೆ ವಿವಿಧ ಮಾಧ್ಯಮಗಳ ಮೂಲಕ ಜನರಿಗೆ ಮಾಹಿತಿಯನ್ನು ನೀಡಲಾಗಿದೆ. ಹಾಗೆಯೇ ಸಮೀಕ್ಷೆಗೆ ಕುರಿತಾಗಿ 94813 59000 ಪ್ರತ್ಯೇಕ ಸಹಾಯವಾಣಿ ಬಿಡುಗಡೆ ಮಾಡಿದ್ದು, ವಾರದ ಏಳು ದಿನಗಳ ಕಾಲ ಸಹಾಯವಾಣಿ ಕಾರ್ಯ ನಿರ್ವಹಿಸಲಿದೆ’

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News