ಗಾಯಕ ಸೋನು ನಿಗಮ್ ಬಂಧನಕ್ಕೆ ಒತ್ತಾಯಿಸಿ ಕರವೇ ಧರಣಿ
ಬೆಂಗಳೂರು : ಕನ್ನಡಿಗರನ್ನು ಭಯೋತ್ಪಾದಕರಿಗೆ ಹೋಲಿಸಿದ ಗಾಯಕ ಸೋನು ನಿಗಮ್ ಅವರನ್ನು ಬಂಧಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡರ ನೇತೃತ್ವದಲ್ಲಿ ಬೆಂಗಳೂರಿನ ಫ್ರೀಡಂಪಾರ್ಕ್‍ನಲ್ಲಿ ಸೋಮವಾರ ಧರಣಿ ನಡೆಸಲಾಯಿತು.
ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಟಿ.ಎ.ನಾರಾಯಣಗೌಡ, ಕರ್ನಾಟಕದ ಅನ್ನ ತಿಂದು ಕನ್ನಡ ನಾಡಿನಲ್ಲಿ ಹಣ ಸಂಪಾದಿಸಿಕೊಂಡಿರುವ ಸೋನು ನಿಗಮ್ ಕರ್ನಾಟಕಕ್ಕೆ ಅವಮಾನ ಮಾಡಿದಲ್ಲದೇ, ಮತ್ತೆ ವಿಡಿಯೋ ಮಾಡಿ ಘಟನೆ ಬಗ್ಗೆ ಕ್ಷಮೆಯನ್ನು ಕೇಳದೇ ತನ್ನ ಅಹಂಕಾರವನ್ನು ಮೆರೆದಿದ್ದಾನೆ ಎಂದು ಆಗ್ರಹಿಸಿದರು.
ಸೋನು ನಿಗಮ್ ವಿರುದ್ಧ ಎಫ್‍ಐಆರ್ ದಾಖಲಾಗಿದ್ದು, ಆತನನ್ನು ಕೂಡಲೇ ಬಂಧಿಸಿ ಜೈಲಿಗೆ ಕಳುಹಿಸಬೇಕು, ಕರ್ನಾಟಕ ಸರಕಾರ ಮುಂದಿನ ಯಾವುದೇ ಮನರಂಜನಾ ಕಾರ್ಯಕ್ರಮಕ್ಕೆ ಆಹ್ವಾನಿಸಬಾರದು. ಕರ್ನಾಟಕದಲ್ಲಿನ ಪ್ರತಿಭೆಗಳಿಂದ ಹಾಡಿಸಬೇಕು ಎಂದು ಟಿ.ಎ.ನಾರಾಯಣಗೌಡ ತಿಳಿಸಿದರು.
ಸೋನು ನಿಗಮ್ ಬಳಿ ಈವರೆಗೂ ಇರುವಂತಹ ಕನ್ನಡ ಹಾಡನ್ನು ಹಾಡಿಸಲು ನಮ್ಮದೇನು ಅಭ್ಯಂತರವಿಲ್ಲ. ಕನ್ನಡದ ನಿರ್ಮಾಪಕರಿಗೆ ಯಾವುದೇ ನಷ್ಟವಾಗಬಾರದು. ಆದರೆ, ಮುಂದಿನ ಯಾವ ಚಿತ್ರಕ್ಕೂ ಹಾಡಲು ಅವಕಾಶವನ್ನು ಕೊಡಬಾರದು ಹಾಗೂ ಚಿತ್ರದ ನಿರ್ದೇಶಕರು ಕರ್ನಾಟಕದಲ್ಲಿ ಇವರನ್ನು ಸಂಪೂರ್ಣ ನಿಷೇಧ ಮಾಡಬೇಕು ಎಂದು ಟಿ.ಎ.ನಾರಾಯಣಗೌಡ ಒತ್ತಾಯಿಸಿದರು.
ಈ ಧರಣಿಯಲ್ಲಿ ನೂರಾರು ಕರವೇ ಕಾರ್ಯಕರ್ತರು ಸೋನು ನಿಗಮ್ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.