×
Ad

ನದಿಗೆ ಕೊಳಚೆ ನೀರು; ಕ್ರಮ ಕೈಗೊಳ್ಳುವಂತೆ ಸಿಎಂಗೆ ಪಿ.ಎಂ.ನರೇಂದ್ರಸ್ವಾಮಿ ಮನವಿ

Update: 2025-11-19 21:04 IST

ಬೆಂಗಳೂರು : ಬಹುತೇಕ ಜಿಲ್ಲೆಗಳಲ್ಲಿ ತ್ಯಾಜ್ಯ ನೀರು ನಿರ್ವಹಣಾ ಘಟಕಗಳು ಸರಿಯಾಗಿ ಕೆಲಸ ಮಾಡದೆ ಕೊಳಚೆ ನೀರು ನದಿ ಸೇರುತ್ತಿವೆ. ಇದನ್ನು ತಡೆಯಲು ಕ್ರಮ ಕೈಗೊಳ್ಳುವಂತೆ ಎಲ್ಲ ಜಿಲ್ಲಾಡಳಿತ ಮತ್ತು ಸ್ಥಳೀಯ ಸಂಸ್ಥೆಗಳಿಗೆ ಸೂಚನೆ ನೀಡಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಪಿ.ಎಂ.ನರೇಂದ್ರಸ್ವಾಮಿ ಮನವಿ ಮಾಡಿದ್ದಾರೆ.

ಬುಧವಾರ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸುವರ್ಣ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಜಲ ಮಾಲಿನ್ಯ ತಡೆಯಲು ಮಂಡಳಿಯು ರಾಜ್ಯದಲ್ಲಿರುವ ನದಿ-ನೀರು ಮಾಪನ ಕೇಂದ್ರಗಳನ್ನು ಹೆಚ್ಚಿಸಲು ನಿರ್ಧರಿಸಿದೆ ಎಂದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತ್ಯಾಜ್ಯದಿಂದ ರಸ್ತೆ ನಿರ್ಮಾಣ ಮಾಡುವ ಆವಿಷ್ಠಾರವನ್ನು ಮಾಡಲಾಗಿದೆ. ಇದೇ ರೀತಿ ಎಲ್ಲಾ ಜಿಲ್ಲೆಗಳಲ್ಲೂ ತ್ಯಾಜ್ಯವನ್ನು ಸಮರ್ಪಕವಾಗಿ ಮರುಬಳಕೆ ಆಗುವಂತೆ ಕ್ರಮ ಕೈಗೊಳ್ಳಲು ಸಿಎಂ ಸಿದ್ದರಾಮಯ್ಯ ಅವರಿಗೆ ನರೇಂದ್ರಸ್ವಾಮಿ ಮನವಿ ಮಾಡಿದರು.

ದಾವಣಗೆರೆ ಜಿಲ್ಲೆಯಲ್ಲಿ ಗೃಹ ಬಳಕೆಯ ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಗ್ರಹಿಸಿ, ಸಂಸ್ಕರಿಸಲಾಗುತ್ತಿದೆ. ಇದು ರಾಜ್ಯಕ್ಕೆ ಮಾದರಿಯಾಗಬೇಕು. ಎಲ್ಲಾ ಜಿಲ್ಲೆಗಳೂ ಇದೇ ರೀತಿ ಏಕ ಬಳಕೆ ಪ್ಲಾಸ್ಟಿಕ್ ಮುಕ್ತ ಮಾಡಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಬೇಕೆಂದು ನರೇಂದ್ರಸ್ವಾಮಿ ಸಿಎಂಗೆ ಕೇಳಿಕೊಂಡರು. ಅಲ್ಲದೆ ತ್ಯಾಜ್ಯ ಕಡಿಮೆ ಮಾಡಿ, ಪುನರ್ ಬಳಕೆ ಹೆಚ್ಚಿಸುವುದಕ್ಕೆ ಪೂರಕವಾಗಿ ವರ್ತುಲ ಅರ್ಥವ್ಯವಸ್ಥೆ ಮತ್ತು ಸುಸ್ಥಿರತೆ ಎಂಬ ವಿಚಾರ ಸಂಕಿರಣದಲ್ಲಿ ತಜ್ಞರು ನೀಡಿದ ಸಲಹೆಯನ್ನು ಆಧರಿಸಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಹೇಳಿದರು.

ಪರಿಸರ ಸಂರಕ್ಷಣೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು, ಮಾಲಿನ್ಯ ನಿಯಂತ್ರಣ ಮಂಡಳಿಯನ್ನು ಹಳ್ಳಿ, ಹಳ್ಳಿಗೆ ಕೊಂಡೊಯ್ಯುವುದು ಮತ್ತು ಮಂಡಳಿ ಸ್ಥಾಪನೆಯಾಗಲು ಕಾರಣಕರ್ತರಾದ ಇಂದಿರಾ ಗಾಂಧಿ ಅವರನ್ನು ಸ್ಮರಿಸುವುದು ಸುವರ್ಣ ಮಹೋತ್ಸವದ ಉದ್ದೇಶ. ಇದೇ ಕಾರಣಕ್ಕೆ ಬೆಂಗಳೂರಿನಲ್ಲಿ ಮಾತ್ರವೇ ಸುವರ್ಣ ಮಹೋತ್ಸವ ಮಾಡದೆ ರಾಜ್ಯದ 25 ಜಿಲ್ಲೆಗಳನ್ನು ಒಳಗೊಂಡು 14 ಕಡೆ ಕಾರ್ಯಕ್ರಮಗಳನ್ನು ಮಾಡಲಾಗಿದೆ ಎಂದು ನರೇಂದ್ರಸ್ವಾಮಿ ತಿಳಿಸಿದರು.

ಇಂದಿರಾ ಗಾಂಧಿಯವರು ಮಾಲಿನ್ಯ ನಿಯಂತ್ರಣ ಮಂಡಳಿಗಳನ್ನು ಸ್ಥಾಪನೆ ಮಾಡಿರುವುದು ಮಾತ್ರವಲ್ಲ, ಪರಿಸರ ಸಂರಕ್ಷಣೆ ಮತ್ತು ಮಾಲಿನ್ಯ ನಿಯಂತ್ರಣಕ್ಕೆ ಸಂಬಂಧಪಟ್ಟಂತೆ ಹಲವು ಕಾಯ್ದೆಗಳನ್ನು ಜಾರಿಗೆ ತಂದರು. 1972ರಲ್ಲಿ ರಾಷ್ಟ್ರೀಯ ಪರಿಸರ ಯೋಜನೆ ಮತ್ತು ಸಮನ್ವಯ ಸಮಿತಿ ರಚಿಸಿದರು. ಅದೇ ವರ್ಷ ಅಳಿವಿನಂಚಿನಲ್ಲಿರುವ ಪ್ರಾಣಿ-ಪಕ್ಷಿಗಳ ಪ್ರಭೇದಗಳನ್ನು ರಕ್ಷಿಸಲು ವನ್ಯಜೀವಿ ಸಂರಕ್ಷಣಾ ಕಾಯ್ದೆ-1972 ಅನ್ನು ಜಾರಿಗೆ ತಂದರು ಎಂದು ನರೇಂದ್ರಸ್ವಾಮಿ ಸ್ಮರಿಸಿದರು.

1973ರಲ್ಲಿ ಅಳಿವಿನಂಚಿನಲ್ಲಿರುವ ಹುಲಿಗಳನ್ನು ಮತ್ತು ಅವುಗಳ ಆವಾಸಸ್ಥಾನಗಳನ್ನು ರಕ್ಷಿಸಲು ಪ್ರಾಜೆಕ್ಟ್ ಟೈಗರ್ ಎಂಬ ವನ್ಯಜೀವಿ ಸಂರಕ್ಷಣಾ ಯೋಜನೆಯನ್ನು ಇಂದಿರಾ ಗಾಂಧಿ ರೂಪಿಸಿದರು. 1974ರಲ್ಲಿ ಜಲ ಮಾಲಿನ್ಯ ನಿಯಂತ್ರಣ ಕಾಯ್ದೆಯನ್ನು ಜಾರಿಗೆ ತಂದರು. ಅದೇ ವರ್ಷ ಕೇಂದ್ರ ಮತ್ತು ರಾಜ್ಯ ಸರಕಾರಗಳ ಅಧೀನದಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿಗಳನ್ನು ಸ್ಥಾಪಿಸಿದರು. 1981ರಲ್ಲಿ ವಾಯು (ಮಾಲಿನ್ಯ ತಡೆ ಮತ್ತು ನಿಯಂತ್ರಣ) ಕಾಯ್ದೆ ಜಾರಿಗೆ ತಂದರು. ಸುವರ್ಣ ಮಹೋತ್ಸವದ ವೇಳೆ ಈ ಕಾಯ್ದೆಗಳ ಬಗ್ಗೆ ಜನರಿಗೆ ತಿಳಿಸಲಾಗುತ್ತಿದೆ ಎಂದು ನರೇಂದ್ರಸ್ವಾಮಿ ಹೇಳಿದರು.

‘ಇಂದಿರಾ ಪ್ರಿಯದರ್ಶಿನಿ ಪರಿಸರ ಪ್ರಶಸ್ತಿ’ ಪ್ರದಾನ : ಇದೇ ವೇಳೆಯಲ್ಲಿ ಪರಿಸರ ಜಾಗೃತಿ, ಪರಿಸರ ಸಂರಕ್ಷಣೆ ಮೂಲಕ ಮಾಲಿನ್ಯ ಮುಕ್ತ ಕರ್ನಾಟಕದ ನಿರ್ಮಾಣಕ್ಕೆ ಕೈಜೋಡಿಸಿ ಪರಿಸರ ಕಾಳಜಿಯಲ್ಲಿ ಸಾಧನೆಗೈದ ಪರಿಸರವಾದಿಗಳಿಗೆ ಮಂಡಳಿ ವತಿಯಿಂದ ‘ಇಂದಿರಾ ಪ್ರಿಯದರ್ಶಿನಿ ಪರಿಸರ ಪ್ರಶಸ್ತಿ’ಯನ್ನು ಪ್ರದಾನ ಮಾಡಲಾಯಿತು. ಕೆರೆ ಸಂರಕ್ಷಣೆ, ಅರಣ್ಯ ವೃದ್ಧಿ, ಪ್ಲಾಸ್ಟಿಕ್ ಮುಕ್ತ ಸಮಾಜ ನಿರ್ಮಾಣದಲ್ಲಿ ಸಾಧನೆಗೈದ ವ್ಯಕ್ತಿಗಳು, ಸಂಸ್ಥೆ ಮತ್ತು ಜಿಲ್ಲಾಡಳಿತಕ್ಕೆ ರಾಜ್ಯ ಮಟ್ಟದ ಐದು ಪ್ರಶಸ್ತಿ ಜೊತೆಗೆ ಜಿಲ್ಲಾ ಮಟ್ಟದ ಪ್ರಶಸ್ತಿಗಳನ್ನು ವಿತರಣೆ ಮಾಡಲಾಯಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News