×
Ad

ಶಾಹೀನ್ ಸಮೂಹ ಶಿಕ್ಷಣ ಸಂಸ್ಥೆ ವತಿಯಿಂದ 1000 ವಿದ್ಯಾರ್ಥಿಗಳಿಗೆ ವಿಶೇಷ ವಿದ್ಯಾರ್ಥಿ ವೇತನ : ಡಾ.ಅಬ್ದುಲ್ ಖದೀರ್

Update: 2025-05-13 19:02 IST

ಬೆಂಗಳೂರು : ಸರಕಾರಿ ಹಾಗೂ ಅನುದಾನಿತ ಶಾಲೆಯ 1000 ವಿದ್ಯಾರ್ಥಿಗಳಿಗೆ ಶಾಹೀನ್ ಸಮೂಹ ಶಿಕ್ಷಣ ಸಂಸ್ಥೆಯ ವತಿಯಿಂದ ವಿಶೇಷ ವಿದ್ಯಾರ್ಥಿ ವೇತನವನ್ನು ಪ್ರಸಕ್ತ ಶೈಕ್ಷಣಿಕ ವರ್ಷಕ್ಕೆ ಘೋಷಣೆ ಮಾಡುತ್ತಿದೆ ಎಂದು ಶಾಹೀನ್ ಸಮೂಹ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ಡಾ.ಅಬ್ದುಲ್ ಖದೀರ್ ತಿಳಿಸಿದರು.

ಮಂಗಳವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ದಾರುಸ್ಸಲಾಮ್ ಕಟ್ಟಡದ ಬಿಫ್ಟ್ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯದ ಸರಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಕನ್ನಡ, ಉರ್ದು ಅಥವಾ ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ಪಡೆದಂತಹ ಎಸೆಸೆಲ್ಸಿ ಪರೀಕ್ಷೆಯಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದಂತಹ ವಿದ್ಯಾರ್ಥಿಗಳು ಈ ವಿದ್ಯಾರ್ಥಿವೇತನದ ಸೌಲಭ್ಯ ಪಡೆಯಲು ಅರ್ಜಿ ಸಲ್ಲಿಸಬಹುದಾಗಿದೆ ಎಂದು ಹೇಳಿದರು.

ಈ ಉಪಕ್ರಮದ ಮೂಲಕ ಆಯ್ಕೆಯಾಗುವ ವಿದ್ಯಾರ್ಥಿಗಳಿಗೆ ದೇಶದ ವಿವಿಧ ಭಾಗಗಳಲ್ಲಿರುವ ಶಾಹೀನ್ ಪಿಯು ಕಾಲೇಜುಗಳಲ್ಲಿ ಶೇ.75ರಷ್ಟು ಟ್ಯೂಷನ್ ಶುಲ್ಕದಿಂದ ವಿನಾಯಿತಿ ನೀಡಲಾಗುವುದು. ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಲ್ಲಿರುವ ಮಕ್ಕಳಿಗೆ ಈ ವಿದ್ಯಾರ್ಥಿವೇತನ ತುಂಬಾ ಸಹಕಾರಿಯಾಗಲಿದೆ ಎಂದು ಅಬ್ದುಲ್ ಖದೀರ್ ತಿಳಿಸಿದರು.

ಈ ವಿದ್ಯಾರ್ಥಿವೇತನಕ್ಕಾಗಿ ಅರ್ಹ ವಿದ್ಯಾರ್ಥಿಗಳು ತಮ್ಮ ಸಮೀಪದ ಶಾಹೀನ್ ಕಾಲೇಜುಗಳಿಗೆ ಭೇಟಿ ನೀಡಿ ಅಥವಾ ನಮ್ಮ ಸಂಸ್ಥೆಯ ವೆಬ್ ಸೈಟ್ www.shaheengroup.org ಗೆ ಭೇಟಿ ನೀಡಿ ಮೇ 15ರೊಳಗೆ ಅರ್ಜಿ ಸಲ್ಲಿಸಬೇಕಿದೆ. ಮೇ 18ರಂದು ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳ ಸಂದರ್ಶನ ಶಾಹೀನ್ ಕಾಲೇಜುಗಳಲ್ಲಿ ನಡೆಯಲಿದೆ. ಗ್ರಾಮೀಣ ಭಾಗದವರು, ವಿಕಲಚೇತನರು ಹಾಗೂ ಅನಾಥ ಮಕ್ಕಳಿಗೆ ಆದ್ಯತೆ ನೀಡಲಾಗುವುದು ಎಂದು ಅವರು ಹೇಳಿದರು.

ಕೇರ್ಸ್ ಉಪಕ್ರಮ: ಆರ್ಥಿಕ ಸಮಸ್ಯೆಯಿಂದಾಗಿ ಯಾವುದೇ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ‘ಕೇರ್ಸ್’ ಉಪಕ್ರಮ ಆರಂಭಿಸಲಾಗಿದೆ. ಇದರಡಿಯಲ್ಲಿ ಮಸೀದಿ, ಬೈತುಲ್ ಮಾಲ್, ದೇವಸ್ಥಾನ, ಚರ್ಚ್‍ನಂತಹ ಧಾರ್ಮಿಕ ಕೇಂದ್ರಗಳು ಅತ್ಯಂತ ಬಡ ಕುಟುಂಬದ ಮಕ್ಕಳ ಶೈಕ್ಷಣಿಕ ವೆಚ್ಚದ ಶೇ.40ರಷ್ಟು ಪಾವತಿಸಲು ಮುಂದೇ ಬಂದಲ್ಲಿ ಶಾಹೀನ್ ಸಂಸ್ಥೆಯು ಶೇ.60ರಷ್ಟು ವಿದ್ಯಾರ್ಥಿವೇತನ ನೀಡಲು ಸಿದ್ಧವಿದೆ ಎಂದು ಅಬ್ದುಲ್ ಖದೀರ್ ತಿಳಿಸಿದರು.

ರಾಜ್ಯದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು ಈ ಬಾರಿ 100 ಮದ್ರಸಾಗಳಲ್ಲಿ ಧಾರ್ಮಿಕ ಶಿಕ್ಷಣದ ಜೊತೆ ಲೌಕಿಕ ಶಿಕ್ಷಣ ನೀಡಲು ನಿರ್ಧರಿಸಿದೆ. ಅದರಂತೆ, ಈಗಾಗಲೇ 97 ಮದ್ರಸಾಗಳಲ್ಲಿ ಕೆಲಸ ಆರಂಭವಾಗಿದೆ. ಶಾಲೆಯನ್ನು ಅರ್ಧಕ್ಕೆ ತೊರೆದಿರುವಂತಹ ಸುಮಾರು 2000 ಮಕ್ಕಳ ದಾಖಲಾತಿಗೆ ಅವಕಾಶವಿದೆ. 12 ವರ್ಷ ಮೇಲ್ಪಟ್ಟ ವಿದ್ಯಾರ್ಥಿಗಳಿಗೆ ತರಬೇತಿ ನೀಡಿ ಎರಡು ವರ್ಷಗಳಲ್ಲಿ ಅವರು ಎಸೆಸೆಲ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವಂತೆ ಮಾಡಲಾಗುವುದು ಎಂದು ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಶಿಕ್ಷಣ ತಜ್ಞ ಸೈಯದ್ ತನ್ವೀರ್ ಅಹ್ಮದ್, ಶಾಹೀನ್ ಸಮೂಹ ಶಿಕ್ಷಣ ಸಂಸ್ಥೆಗಳ ಸ್ಥಾನಿಕ ಮುಖ್ಯಸ್ಥ ಶೇಕ್ ಶಫೀಕ್, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ತೌಸಿಫ್ ಅಹ್ಮದ್, ನಿರ್ದೇಶಕ ಆಸಿಫ್ ಅಲಿ ಉಪಸ್ಥಿತರಿದ್ದರು.

ತಜಕೀಸ್ತಾನ್‍ನಲ್ಲಿ ಎಂಬಿಬಿಎಸ್ ಕೋರ್ಸ್: ತಜಕೀಸ್ತಾನ್ ಸರಕಾರದ ವತಿಯಿಂದ ನಡೆಸಲಾಗುತ್ತಿರುವ ಎಂ.ಎಸ್.ಐ.ಟಿ ವೈದ್ಯಕೀಯ ಮಹಾವಿದ್ಯಾಲಯದ ಜೊತೆ ಶಾಹೀನ್ ಸಮೂಹ ಶಿಕ್ಷಣ ಸಂಸ್ಥೆಯು ಒಡಂಬಡಿಕೆ ಮಾಡಿಕೊಂಡಿದೆ. ಎಂ.ಬಿ.ಬಿ.ಎಸ್ ಓದಲು ಬಯಸುವ ಭಾರತೀಯ ಮಕ್ಕಳಿಗೆ ಅಲ್ಲಿ ದಾಖಲಾತಿ ಕಲ್ಪಿಸಲಾಗುವುದು. ವಿದ್ಯಾರ್ಥಿಗಳಿಗೆ ಭಾರತೀಯ ಪಠ್ಯಕ್ರಮವನ್ನೆ ಬೋಧಿಸಲಾಗುತ್ತದೆ. ಸುಮಾರು 500 ವಿದ್ಯಾರ್ಥಿಗಳ ದಾಖಲಾತಿಗೆ ಅವಕಾಶವಿದೆ. ಅಲ್ಲಿ ಎಂಬಿಬಿಎಸ್ ಪೂರ್ಣಗೊಳಿಸಿದ ಬಳಿಕ ಭಾರತದಲ್ಲಿ ಅವರು ನೀಡಬೇಕಿರುವ ಅರ್ಹತಾ ಪರೀಕ್ಷೆಯ ಕುರಿತು ತರಬೇತಿ ನೀಡಲಾಗುವುದು. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನಮ್ಮ ಸಹಾಯವಾಣಿ 9686601088, ವೆಬ್‍ಸೈಟ್ www.msitshaheen.com ಗೆ ಭೇಟಿ ನೀಡಬಹುದು.

-ಡಾ.ಅಬ್ದುಲ್ ಖದೀರ್, ಮುಖ್ಯಸ್ಥ, ಶಾಹೀನ್ ಸಮೂಹ ಶಿಕ್ಷಣ ಸಂಸ್ಥೆ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News