ಬೆಂಗಳೂರನ್ನು ಭವಿಷ್ಯದ ಸುಸ್ಥಿರ ನಗರವನ್ನಾಗಿ ಮಾಡಲು ವಿಶೇಷ ಕಾರ್ಯಕ್ರಮ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಅಮೆರಿಕಾದ ಸ್ಯಾನ್ ಫ್ರಾನ್ಸಿಸ್ಕೋ ನಗರಕ್ಕೆ ಎದುರಾಗುವ ಸಮಸ್ಯೆಗಳನ್ನು ಬಗೆಹರಿಸಲು ಅಲ್ಲಿನ ಕಂಪನಿಗಳ ಗುಂಪು ಮಾಡಿ ಅಗತ್ಯವಿರುವ ಸಲಹೆ ಮತ್ತು ಪರಿಹಾರ ಕೊಡುವ ನಿಟ್ಟಿನಲ್ಲಿ ರೂಪಿಸಿರುವ ‘ಎಸ್ ಸ್ಯಾನ್ ಫ್ರಾನ್ಸಿಸ್ಕೋ’ ಎಂಬ ಕಾರ್ಯಕ್ರಮದಂತೆ, ಬೆಂಗಳೂರನ್ನು ಭವಿಷ್ಯದ ಸುಸ್ಥಿರ ನಗರವನ್ನಾಗಿಸಲು ‘ಎಸ್ ಬೆಂಗಳೂರು’ ಎಂಬ ವಿಶೇಷ ಯೋಜನೆ ಅನುಷ್ಠಾನ ಮಾಡುವ ಬಗ್ಗೆ ಚರ್ಚೆ ಆಗಿದೆ ಎಂದು ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.
ಬುಧವಾರ ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಕಿಯೋನಿಸ್ಕ್ ಅಧ್ಯಕ್ಷ ಶರತ್ ಬಚ್ಚೇಗೌಡ ಜೊತೆ ಜಂಟಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಇದಕ್ಕಾಗಿ ಬೆಂಗಳೂರಿನಲ್ಲಿರುವ ಹಲವಾರು ಕಂಪನಿಗಳ ಸಹಭಾಗಿತ್ವದಲ್ಲಿ ಬೆಂಗಳೂರಿನ ಸಮಸ್ಯೆಗಳ ಪಟ್ಟಿ ಮಾಡಿ ಅದಕ್ಕೆ ಪರಿಹಾರ ಕಲ್ಪಿಸಲು ಅಗತ್ಯವಿರುವ ವರ್ಕಿಂಗ್ ಗ್ರೂಪ್ ಮಾಡಿ ಕೆಲಸ ಆರಂಭ ಮಾಡಿದ್ದೇವೆ ಎಂದು ಹೇಳಿದರು.
ದೊಡ್ಡ ಪ್ರಮಾಣದಲ್ಲಿ ನಾಗರಿಕರು, ತಜ್ಞರು, ಸರಕಾರ ಎಲ್ಲರೂ ಸೇರಿ ಸಮಸ್ಯೆಗಳಿಗೆ ಪರಿಹಾರ ಕೊಡುವ ಕೆಲಸ ಇದಾಗಲಿದೆ. ಆದಷ್ಟು ಬೇಗ ಈ ಕಾರ್ಯಕ್ರಮ ಅನುಷ್ಠಾನ ಮಾಡುತ್ತೇವೆ. ಕಳೆದ ವರ್ಷ 30 ಸಾವಿರ ಕೋಟಿ ರೂ. ಬಂಡವಾಳ ತರಲಾಗಿತ್ತು. ಇದರಲ್ಲಿ ಈಗಾಗಲೇ 23 ಸಾವಿರ ಕೋಟಿ ರೂ. ಬಂಡವಾಳ ಬಂದಿದೆ. ಈ ಬಾರಿ ಸುಮಾರು 7100 ಕೋಟಿ ರೂ. ಬಂಡವಾಳ ಹೂಡಿಕೆ ಒಪ್ಪಂದ ಆಗಿದೆ. 9700 ಉದ್ಯೋಗಗಳು ಸಿಗಲಿವೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು.
ನನಗೆ ನಿಯೋಗದೊಂದಿಗೆ ಅಮೆರಿಕ ಪ್ರವಾಸ ಕೈಗೊಳ್ಳಲು ಕೇಂದ್ರ ಸರಕಾರ ಅನುಮತಿ ಕೊಟ್ಟಿರಲಿಲ್ಲ. ಇದರಿಂದಾಗಿ, ಈ ಬಾರಿ ಬಂಡವಾಳ ಆಕರ್ಷಿಸಲು ಸ್ವಲ್ಪ ಹಿನ್ನಡೆಯಾಗಿದೆ. ನನಗೆ ಅನುಮತಿ ನಿರಾಕರಿಸಿದ ಬಗ್ಗೆ ಕೇಂದ್ರ ವಿದೇಶಾಂಗ ಸಚಿವಾಲಯಕ್ಕೆ ಪತ್ರ ಬರೆದು ಸ್ಪಷ್ಟೀಕರಣ ಕೇಳಿದ್ದೇನೆ. ಆದರೆ, ಈವರೆಗೆ ಅವರಿಂದ ಉತ್ತರ ಬಂದಿಲ್ಲ ಎಂದು ಅವರು ಹೇಳಿದರು.
ನರೇಗಾ ಯೋಜನೆಯಲ್ಲಿ ಕೋಟ್ಯಂತರ ರೂ.ಅವ್ಯವಹಾರ ಆಗಿದೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ಮಾಡಿರುವ ಆರೋಪದ ಕುರಿತು ಪ್ರತಿಕ್ರಿಯಿಸಿದ ಅವರು, ರಾಜೀವ್‍ಗೆ ಹೇಗೆ ವ್ಯವಸ್ಥೆಯಲ್ಲಿ ಕೆಲಸ ಆಗುತ್ತದೆ ಅಂತ ತಿಳಿದುಕೊಳ್ಳಲಿ ಹೇಳಿ. ಸುಮ್ಮನೆ ಆರೋಪ ಮಾಡೋದು ಬೇಡ. ಯಾವುದಾದರೂ ದೂರು ಬಂದರೆ ನಾವು ಪರಿಶೋಧನೆ ಮಾಡಿಸುತ್ತೇವೆ ಎಂದು ಹೇಳಿದರು.
ನರೇಗಾ ಯೋಜನೆಗೆ 15ನೆ ಹಣಕಾಸು ಆಯೋಗದ ಹಣ ಬರೋದು ಕೇಂದ್ರ ಸರಕಾರದಿಂದ. ಹಾಗಾದರೆ, ಹಾಗಾದ್ರೆ ಕೇಂದ್ರದವರು ದುಡ್ಡು ತಗೊಂಡಿದ್ದಾರಾ? ಸಾಮಾನ್ಯ ಜ್ಞಾನ ಇಟ್ಟುಕೊಂಡು ರಾಜೀವ್ ಮಾತನಾಡಬೇಕು. ನರೇಗಾ ಯೋಜನೆಗೆ ಹಣ ಮಂಜೂರಾತಿ ಮಾಡೋದು ಕೇಂದ್ರ ಸರಕಾರ. ಬಿಜೆಪಿ ಸರಕಾರದ ಅವಧಿಯಲ್ಲಿ ನೂರಾರು ಕೋಟಿ ರೂ.ಅಕ್ರಮ ಮಾಡಿದ್ದರು. ಆಗ ನೀವು ಎಷ್ಟು ಹಣ ಪಡೆದಿದ್ರಿ ಎಂದು ಅವರು ಪ್ರಶ್ನಿಸಿದರು.
ಅಕ್ರಮದ ಆರೋಪದ ಹಿನ್ನೆಲೆಯಲ್ಲಿ ಪರಿಶೋಧನೆ ಮಾಡಿಸಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳನ್ನು ನಾನೇ ಅಮಾನತು ಮಾಡಿದ್ದೇನೆ. ಅಕ್ರಮ ನಡೆದಾಗ ಇಲಾಖೆಯ ಸಚಿವರಾಗಿದ್ದವರ ಹೆಸರು ನಾನು ಎಲ್ಲಾದರೂ ಹೇಳಿದ್ದೀನಾ? ಪ್ರಿಯಾಂಕ್ ಖರ್ಗೆ ಹೇಳಿದರು.
ಗ್ಯಾರಂಟಿಗಳಿಂದ ಜನರು ಸೋಮಾರಿಗಳು ಆಗುತ್ತಾರೆ ಎಂಬ ರಂಭಾಪುರಿ ಶ್ರೀಗಳ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಶ್ರೀಗಳ ಸುತ್ತಮುತ್ತ ಏನಿದೆ ಗೊತ್ತಿಲ್ಲ. ಗ್ಯಾರಂಟಿ ಯೋಜನೆ ಸ್ವಾಭಿಮಾನದ ಬದುಕು ಕೊಡುತ್ತಿದೆ. ಬಡವರನ್ನ ಮುಖ್ಯ ವಾಹಿನಿಗೆ ತರಲು ಸಹಾಯವಾಗಿದೆ. ಹೆಣ್ಣುಮಕ್ಕಳು ಯಾರ ಬಳಿಯೂ ಕೈ ಚಾಚುತ್ತಿಲ್ಲ, ಯಾರ ಬಳಿಯೂ ಸಾಲ ಮಾಡುತ್ತಿಲ್ಲ. ಅವರಿಗೆ ಸ್ವಾಭಿಮಾನದ ಬದುಕು ಸಿಕ್ಕಿದೆ ಎಂದು ಹೇಳಿದರು.
ಕಾಂಗ್ರೆಸ್‍ನ ಕೆಲವು ಶಾಸಕರು ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಹೇಳುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಪ್ರಿಯಾಂಕ್ ಖರ್ಗೆ, ಈ ಬಗ್ಗೆ ಖರ್ಗೆ ಸಾಹೇಬ್ರು, ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷರು, ಕೆ.ಸಿ.ವೇಣುಗೋಪಾಲ್, ರಾಹುಲ್ ಗಾಂಧಿ ಹೊರತುಪಡಿಸಿ ಬೇರೆ ಯಾರು ಏನು ಹೇಳಿದರೂ ನಾನು ಕೇಳುವುದಿಲ್ಲ. ಈ ಬಗ್ಗೆ ನಾನು ಏನಾದರೂ ಹೇಳಿದರೂ ನೀವು ಕೇಳಬೇಡಿ ಎಂದು ತಿಳಿಸಿದರು.
ಸಹಕಾರ ಸಚಿವ ಕೆ.ಎನ್.ರಾಜಣ್ಣ ಸೆಪ್ಟಂಬರ್‍ನಲ್ಲಿ ಕ್ರಾಂತಿ ಆಗುತ್ತದೆ ಎಂದು ಹೇಳಿದ್ದಾರಲ್ಲ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಕ್ರಾಂತಿ ಬಗ್ಗೆ ಅವರು ಏನು ಹೇಳಿದ್ದಾರೋ ಅದರ ಬಗ್ಗೆ ನೀವು ಅವರನ್ನೆ ಕೇಳಬೇಕು. ನಮ್ಮಲ್ಲಿ ಯಾವ ಕ್ರಾಂತಿಯೂ ಇಲ್ಲ. ಎಲ್ಲ ಶಾಂತಿಯಾಗಿದೆ. ಅಧಿಕಾರ ಹಂಚಿಕೆ ಚರ್ಚೆ ಆಗಿದೆಯಾ ಎಂದು ಕೇಳಿದರೆ ಅದು ನನಗೆ ಗೊತ್ತಿಲ್ಲ ಎಂದು ಹೇಳಿದರು.
ಕಾಂಗ್ರೆಸ್ ಶಾಸಕರ ಅಹವಾಲು ಕೇಳಲು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಬಾರದೆ ಹೋದರೆ, ಬಿ.ಎಲ್.ಸಂತೋಷ್ ಬರುತ್ತಾರಾ? ಇಲ್ಲವೇ ಹೊಸಬಾಳೆ ಬರುತ್ತಾರಾ? ನಮ್ಮ ಪಕ್ಷದಲ್ಲಿ ವ್ಯವಸ್ಥೆ ಇದೆ. ಆರು ತಿಂಗಳ ಹಿಂದೆಯೂ ಇದೇ ರೀತಿ ಸುರ್ಜೆವಾಲಾ ಎಲ್ಲರ ಜೊತೆ ಸಭೆಗಳನ್ನು ಮಾಡಿದ್ದರು. ನಮಗೆ ಜನ ಹಾಗೂ ಹೈಕಮಾಂಡ್ ಮುಖ್ಯ ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಬಿಜೆಪಿಯವರು ನಮ್ಮಗೆ ಬಗ್ಗೆ ಮಾತನಾಡುವ ಬದಲು ಅವರ ಪಕ್ಷದಲ್ಲಿನ ಗೊಂದಲಗಳನ್ನು ನೋಡಿಕೊಳ್ಳಲಿ. ದಾವಣಗೆರೆ, ಬೆಳಗಾವಿ ಸೇರಿದಂತೆ ಬೇರೆ ಕಡೆ ಏನೇನು ಆಗುತ್ತಿದೆ ನೋಡಲಿ. ವಿಪಕ್ಷ ನಾಯಕ ಅಶೋಕ್ ನಾಲ್ಕು ದಿನ ದಿಲ್ಲಿಯಲ್ಲಿ ಇದ್ದದ್ದು ಯಾಕೆ? ಎಂದು ಅವರು ಪ್ರಶ್ನಿಸಿದರು.