ಕೇಂದ್ರ ಸರಕಾರದಿಂದ ಏಕಪಕ್ಷೀಯ ಸರ್ವಾಧಿಕಾರಿ ಪ್ರವೃತ್ತಿ ಪ್ರದರ್ಶನ: ವಿ.ಎಸ್.ಉಗ್ರಪ್ಪ
ಬೆಂಗಳೂರು, ಜು.23: ರಾಜಕೀಯ ಕಾರಣಗಳಿಗಾಗಿ ಈ.ಡಿ ಬಳಕೆ ಮಾಡುತ್ತಿರುವ ಕುರಿತು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ನೇತೃತ್ವದ ಪೀಠ ನೀಡಿದ ತೀರ್ಪು ಹಾಗೂ ಉಪ ರಾಷ್ಟ್ರಪತಿ ಜಗದೀಪ್ ಧನ್ಕರ್ ಅವರ ದಿಢೀರ್ ರಾಜಿನಾಮೆ ಘಟನಾವಳಿಗಳು ನೋಡಿದರೆ, ದೇಶದಲ್ಲಿ ಕೇಂದ್ರ ಸರಕಾರದ ಏಕಪಕ್ಷೀಯ ಸರ್ವಾಧಿಕಾರಿ ಪ್ರವೃತ್ತಿ ಪ್ರದರ್ಶನ ಕಂಡು ಬರುತ್ತದೆ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ತಿಳಿಸಿದರು.
ಬುಧವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮುಡಾ ಪ್ರಕರಣದ ಬಗ್ಗೆ ತೀರ್ಪು ನೀಡುವಾಗ ಸುಪ್ರೀಂಕೋರ್ಟ್ ವ್ಯಕ್ತಪಡಿಸಿರುವ ಅಭಿಪ್ರಾಯ ನೋಡಿದರೆ, ನರೇಂದ್ರ ಮೋದಿ ಹಾಗೂ ಅಮಿತ್ ಶಾ ನೇತೃತ್ವದ ಬಿಜೆಪಿಯು ವಿರೋಧ ಪಕ್ಷದ ರಾಜಕಾರಣಿಗಳನ್ನು ಇಕ್ಕಟ್ಟಿಗೆ ಸಿಲುಕಿಸಿ, ಅವರನ್ನು ರಾಜಕೀಯವಾಗಿ ಮುಗಿಸುವ ಸಂಚುಗಳು ನಡೆಸುತ್ತಿದೆ ಎಂಬುದು ಸ್ಪಷ್ಟವಾಗುತ್ತದೆ ಎಂದು ಹೇಳಿದರು.
ಕಳೆದ 10 ವರ್ಷಗಳಲ್ಲಿ ಈ.ಡಿ 7405 ಪ್ರಕರಣಗಳನ್ನು ದಾಖಲಿಸಿದೆ. ಅದರಲ್ಲಿ 193 ಪ್ರಕರಣಗಳು ರಾಜಕಾರಣಿಗಳ ವಿರುದ್ಧ ದಾಖಲಾಗಿವೆ. ಆದರೆ, ಶಿಕ್ಷೆ ಆಗಿರುವುದು ಸತ್ಯಂ ಕಂಪ್ಯೂಟರ್ಸ್ ಹಾಗೂ ರೋಸ್ ವ್ಯಾಲಿ ಕಂಪನಿಯ 2 ಪ್ರಕರಣಗಳಲ್ಲಿ ಮಾತ್ರ. ಇನ್ನುಳಿದಂತೆ ಈ.ಡಿ ದಾಖಲಿಸಿದ ಯಾವುದೇ ಪ್ರಕರಣದಲ್ಲಿ ಶಿಕ್ಷೆಯಾದ ನಿರ್ದಶನವಿಲ್ಲ ಎಂದು ಉಗ್ರಪ್ಪ ಹೇಳಿದರು.
ಮುಡಾದಲ್ಲಿ 14 ನಿವೇಶನಗಳನ್ನು ಹಿಂದಿರುಗಿಸಿದ ಮೇಲೆ, ಮನಿಲ್ಯಾಂಡ್ರಿಗ್ ಉದ್ಭವವೇ ಆಗುವುದಿಲ್ಲ. ಹೈಕೋರ್ಟ್ ಆದೇಶದ ವಿರುದ್ಧ ಸುಪ್ರೀಂಕೋರ್ಟ್‍ನಲ್ಲಿ ಪ್ರಕರಣ ದಾಖಲಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಕುಟುಂಬದವರನ್ನು ಇಕ್ಕಟ್ಟಿಗೆ ಸಿಲುಕಿಸಲು ಯತ್ನಿಸಿದ ಈ.ಡಿ ಗೆ ಸುಪ್ರೀಂಕೋರ್ಟ್ ಕಪಾಳ ಮೋಕ್ಷ ಮಾಡಿದೆ. ಅದು ಕೇವಲ ಈ.ಡಿಗೆ ಮಾಡಿದ ಕಪಾಳ ಮೋಕ್ಷ ಅಲ್ಲ ಕೇಂದ್ರ ಸರಕಾರಕ್ಕೆ ಮಾಡಿದ ಕಪಾಳ ಮೋಕ್ಷವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ರಾಜಕೀಯ ಕಾರಣಗಳಿಗಾಗಿ ರಾಜಕಾರಣಿಗಳ ವಿರುದ್ಧ ಈ.ಡಿ ಪ್ರಕರಣ ದಾಖಲು ಮಾಡುತ್ತಿರುವುದು ಸಾಬೀತಾಗಿದೆ. ಆದುದರಿಂದ, ಡಿ.ಕೆ.ಶಿವಕುಮಾರ್ ಸೇರಿದಂತೆ ನಮ್ಮ ರಾಜ್ಯದ ನಾಯಕರ ವಿರುದ್ಧ ದಾಖಲಿಸಿರುವ ಪ್ರಕರಣಗಳನ್ನು ಕೂಡಲೆ ಹಿಂಪಡೆಯಬೇಕು ಎಂದು ಉಗ್ರಪ್ಪ ಆಗ್ರಹಿಸಿದರು.
ನ್ಯಾ.ವರ್ಮಾ ವಿರುದ್ಧ ರಾಜ್ಯಸಭೆಯಲ್ಲಿ ಚರ್ಚೆ ನಡೆಸಲು ವಿಪಕ್ಷಗಳು ನೀಡಿದ ನೋಟಿಸ್ ಸ್ವೀಕರಿಸಿ, ಚರ್ಚೆಗೆ ಅವಕಾಶ ಕೊಟ್ಟಿದ್ದಕ್ಕೆ ಉಪ ರಾಷ್ಟ್ರಪತಿ ಜಗದೀಪ್ ಧನ್ಕರ್ ರಾಜಿನಾಮೆ ನೀಡುವಂತೆ ಕೇಂದ್ರ ಸರಕಾರ ಮಾಡಿತು. ಯಾವ ಮುಖ ಇಟ್ಟುಕೊಂಡು ಮೋದಿ, ಸಂವಿಧಾನ, ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುತ್ತಾರೆ ಎಂದು ಅವರು ಪ್ರಶ್ನಿಸಿದರು.