ಜನ ಸಮುದಾಯದಿಂದ ನಮ್ಮನ್ನು ಬೇರ್ಪಡಿಸಲು ಸಾಧ್ಯವಿಲ್ಲ: ಡಾ.ಜಿ.ಪರಮೇಶ್ವರ್
ಬೆಂಗಳೂರು, ಡಿ.5: ಕೆಪಿಸಿಸಿ ಮತ್ತು ಸ್ವಾಭಿಮಾನಿಗಳ ಒಕ್ಕೂಟ ಒಟ್ಟಾಗಿ ಸಮಾವೇಶ ಮಾಡುತ್ತಿದ್ದು, ಯಾವುದೇ ಗೊಂದಲಗಳು ಇಲ್ಲ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ ಹೇಳಿದ್ದಾರೆ.
ಸದಾಶಿವ ನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಮತ್ತು ಸರ್ಕಾರದ ಮೇಲೆ ಸ್ವಾಭಿಮಾನಿ ಒಕ್ಕೂಟಕ್ಕೆ ಸಹಾನುಭೂತಿ ಇದೆ. ಹೀಗಾಗಿ ಒಟ್ಟಿಗೆ ಸಮಾವೇಶ ಮಾಡುತ್ತಿದ್ದು, ಇದರಲ್ಲಿ ಯಾವುದೇ ಗೊಂದಲವಿಲ್ಲ. ಗೊಂದಲ ಇದೆ ಎಂಬಂತೆ ಅವರಿರವರು ಸೃಷ್ಟಿ ಮಾಡುತ್ತಿದ್ದಾರೆ ಎಂದು ಹೇಳಿದರು.
ನಾವು ರಾಜ್ಯದ ಜನತೆಗೆ ಚುನಾವಣೆಯ ಸಂದರ್ಭದಲ್ಲಿ ರಾಜಕೀಯವಾಗಿ ಏನೆಲ್ಲ ಮಾತನಾಡಿದ್ದೇವೆ, ಅದೆಲ್ಲವನ್ನು ನಾವು ಜನಗಳಿಗೆ ಹೇಳಬೇಕು. ಸರ್ಕಾರದ ಕಾರ್ಯಕ್ರಮಗಳಲ್ಲಿ ಅನೇಕ ರಾಜಕೀಯ ವಿಚಾರಗಳನ್ನು ಪ್ರಸ್ತಾಪ ಮಾಡಲು ಆಗುವುದಿಲ್ಲ. ಅದಕ್ಕಾಗಿ ಈ ಸಮಾವೇಶದಲ್ಲಿ ರಾಜಕೀಯ ವಿಚಾರಗಳನ್ನು ಪ್ರಸ್ತಾಪ ಮಾಡುತ್ತೇವೆ. ಜನಗಳಿಗೆ ಸತ್ಯಾಂಶ ಗೊತ್ತಾಗಬೇಕು. ಅನೇಕ ವಿಚಾರದಲ್ಲಿ ವಿಪಕ್ಷದವರು ಮಾಡುವ ಆಪಾದನೆಗಳಿಗೆ ರಾಜಕೀಯವಾಗಿ ಉತ್ತರ ಕೊಡುತ್ತೇವೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದ ಸಮಾವೇಶ ಆಗಿರುವುದರಿಂದ ಯಾವುದೇ ಬಣ ಇಲ್ಲ. ಬಿಜೆಪಿಯಲ್ಲಿ ಮೂರು ಬಣ ಮಾಡಿಕೊಂಡಿದ್ದರಲ್ಲ. ಆ ರೀತಿ ನಮ್ಮ ಪಕ್ಷದಲ್ಲಿ ಬಣ ಇಲ್ಲ. ನಾವೆಲ್ಲ ಒಟ್ಟಿಗಿದ್ದೇವೆ, ಒಟ್ಟಾಗಿ ಆಡಳಿತ ಮಾಡುತ್ತಿದ್ದೇವೆ. ಬಿಜೆಪಿ ಮತ್ತು ಜೆಡಿಎಸ್ನವರು ನಮ್ಮನ್ನು ಜನಸಮುದಾಯದಿಂದ ಬೇರ್ಪಡಿಸಲು ಪ್ರಯತ್ನ ಮಾಡಬಹುದು. ಅದು ಸಾಧ್ಯವಾಗುವುದಿಲ್ಲ ಎಂದರು.
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅನೇಕ ವಿಚಾರಗಳನ್ನು ಪ್ರಸ್ತಾಪ ಮಾಡುತ್ತಾರೆ. ಅದಕ್ಕೆಲ್ಲ ನಾವು ಉತ್ತರ ಕೊಡಬೇಕಿಲ್ಲ. ಅವರು ತಮ್ಮ ಅಭಿಪ್ರಾಯವನ್ನು ಹೇಳಿಕೊಂಡಿರುತ್ತಾರೆ. ಸಂದರ್ಭ ಬಂದಾಗ ನಾವು ಉತ್ತರ ಕೊಡುತ್ತೇವೆ ಎಂದರು.
ಅಧಿಕಾರ ಹಂಚಿಕೆ ಬಗ್ಗೆ ಒಪ್ಪಂದ ಆಗಿರುವ ವಿಚಾರ ನನಗೆ ಗೊತ್ತಿಲ್ಲ. ಈ ಬಗ್ಗೆ ದಿಲ್ಲಿ ಮತ್ತು ರಾಜ್ಯದಲ್ಲಿ ಇಬ್ಬರು, ಮೂವರನ್ನು ಕೇಳಿದ್ದೇನೆ. ಒಪ್ಪಂದ ಆಗಿದೆ ಅಂತ ಯಾರು ಹೇಳಿಲ್ಲ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಯಾವ ಅರ್ಥದಲ್ಲಿ ಹೇಳಿದ್ದಾರೋ ನನಗೆ ಗೊತ್ತಿಲ್ಲ. ಅಂತಹ ಒಪ್ಪಂದ ಆಗಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಈಗಾಗಲೇ ಸ್ಪಷ್ಟವಾಗಿ ಹೇಳಿದ್ದಾರೆ. ಈಗ ಒಪ್ಪಂದ ಆಗಿದೆ ಎನ್ನುವುದಾದರೆ ನಾವೆಲ್ಲ ಯಾಕಿರಬೇಕು ಎಂದು ಹೇಳಿದರು.
ಅವರಿಬ್ಬರೇ ರಾಜಕಾರಣ ನಡೆಸಲಿ. ಬೇರೆಯವರು ಇರುವುದೇ ಬೇಡವೇ? ಆ ರೀತಿ ಒಪ್ಪಂದ ಆಗಿರಲು ಸಾಧ್ಯವಿಲ್ಲ. ಆದ್ದರಿಂದ ಹೈಕಮಾಂಡ್ ಅಂತಿಮವಾಗಿ ಏನು ತೀರ್ಮಾನ ಮಾಡುತ್ತದೆ ಅದಕ್ಕೆ ನಾವು ಬದ್ಧವಾಗಿರುತ್ತೇವೆ. ನಾವ್ಯಾರು ಕೂಡ ಹೈಕಮಾಂಡ್ ಅನ್ನು ಬಿಟ್ಟು ಹೋದವರಲ್ಲ. ಹೈಕಮಾಂಡ್ ಏನು ತೀರ್ಮಸನ ಮಾಡುತ್ತದೆ ಅದನ್ನು ಒಪ್ಪಿಕೊಳ್ಳುತ್ತೇವೆ ಎಂದು ತಿಳಿಸಿದರು.