ಬಾಂಗ್ಲಾದೇಶ: ವಿಮಾನ ದುರಂತ; ಮೃತರ ಸಂಖ್ಯೆ 25ಕ್ಕೆ ಏರಿಕೆ
PC: x.com/timesofindia
ಢಾಕಾ: ಬಾಂಗ್ಲಾದೇಶದ ರಾಜಧಾನಿಯ ಮೈಲ್ಸ್ಟೋನ್ ಸ್ಕೂಲ್ ಅಂಡ್ ಕಾಲೇಜ್ ಕ್ಯಾಂಪಸ್ ನಲ್ಲಿ ಸೋಮವಾರ ಬಾಂಗ್ಲಾದೇಶ ವಾಯುಪಡೆಯ ಯುದ್ಧವಿಮಾನ ಪತನಗೊಂಡು ಸಂಭವಿಸಿದ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 25ಕ್ಕೇರಿದೆ.
ಆರಂಭದಲ್ಲಿ ಸಾವಿನ ಸಂಖ್ಯೆ 20 ಎಂದು ಪ್ರಕಟಿಸಲಾಗಿತ್ತು; ಆದರೆ ವೈದ್ಯರ ಹೇಳಿಕೆಯನ್ನು ಉಲ್ಲೇಖಿಸಿ ವರದಿ ಮಾಡಿರುವ ಎಪಿ, ಸಾವಿನ ಸಂಖ್ಯೆ 25 ಎಂದು ಹೇಳಿದೆ. ಒಟ್ಟು 171 ಮಂದಿ ಗಾಯಗೊಂಡಿದ್ದು, ಈ ಪೈಕಿ ಬಹುತೇಕ 8 ರಿಂದ 14 ವರ್ಷ ವಯಸ್ಸಿನ ವಿದ್ಯಾರ್ಥಿಗಳು.
ಚೀನಾ ನಿರ್ಮಿತ ಎಫ್-7 ಬಿಜೆಐ ವಿಮಾನದ ಪೈಲಟ್ ಕೂಡಾ ದುರಂತದಲ್ಲಿ ಮೃತಪಟ್ಟಿದ್ದಾಗಿ ಬಾಂಗ್ಲಾದೇಶದ ಸೇನೆ ಪ್ರಕಟಿಸಿದೆ. ಯಾಂತ್ರಿಕ ವೈಫಲ್ಯದಿಂದ ಈ ದುರಂತ ಸಂಭವಿಸಿದೆ. ನಿಖರವಾದ ಕಾರಣ ತಿಳಿಯುವ ನಿಟ್ಟಿನಲ್ಲಿ ತನಿಖೆ ಮುಂದುವರಿದಿದೆ ಎಂದು ಸ್ಪಷ್ಟಪಡಿಸಿದೆ.
ಘಟನೆ ಹಿನ್ನೆಲೆಯಲ್ಲಿ ಬಾಂಗ್ಲಾದೇಶದಲ್ಲಿ ಮಂಗಳವಾರ ರಾಷ್ಟ್ರೀಯ ಶೋಕಾಚರಣೆಗೆ ಬಾಂಗ್ಲಾದೇಶದ ಹಂಗಾಮಿ ನಾಯಕ ಮುಹಮದ್ ಯೂನುಸ್ ಕರೆ ನೀಡಿದ್ದಾರೆ. 1984ರಲ್ಲಿ ಚಿತ್ತೋಗ್ರಾಮ್ ನಿಂದ ಢಾಕಾಗೆ ತೆರಳುತ್ತಿದ್ದ ವಿಮಾನ ಮಳೆ ಹಾಗೂ ಗಾಳಿಯ ವೇಳೆ ಅಪಘಾತಕ್ಕೀಡಾಗಿ 49 ಮಂದಿ ಮೃತಪಟ್ಟ ಘಟನೆ ಹೊರತುಪಡಿಸಿದರೆ, ದೇಶದ ಇತಿಹಾಸದಲ್ಲೇ ಇದು ದೊಡ್ಡ ವಿಮಾನ ದುರಂತವಾಗಿದೆ.