ಬೆಳಗಾವಿ: ಮಹಿಳೆಯೊಂದಿಗೆ ಸಿಕ್ಕಿ ಬಿದ್ದ ಸ್ವಾಮೀಜಿ; ಮಠಕ್ಕೆ ನುಗ್ಗಿ ಯುವಕರಿಂದ ಅನೈತಿಕ ಪೊಲೀಸ್‌ಗಿರಿ
ಬೆಳಗಾವಿ, ಜೂ. 23: ಸ್ವಾಮೀಜಿಯೊಬ್ಬರು ಮಹಿಳೆಯೊಂದಿಗೆ ಇದ್ದಾರೆಂದು ಆರೋಪಿಸಿದ ಸ್ಥಳೀಯ ಯುವಕರು ಸ್ವಾಮೀಜಿ ಮೇಲೆ ಹಲ್ಲೆ ಮಾಡಿದ್ದಲ್ಲದೇ, ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿ, ಆಕೆಯ ಮಗಳ ಬಟ್ಟೆ ಹರಿದು ಅನೈತಿಕ ಪೊಲೀಸ್ ಗಿರಿ ನಡೆಸಿರುವ ಘಟನೆ ಜಿಲ್ಲೆಯ ಮೂಡಲಗಿ ತಾಲೂಕಿನ ಶಿವಾಪುರ ಗ್ರಾಮದ ಅಡವಿಸಿದ್ದೇಶ್ವರ ಮಠದಲ್ಲಿ ರವಿವಾರ ರಾತ್ರಿ ನಡೆದಿರುವ ಬಗ್ಗೆ ವರದಿಯಾಗಿದೆ.
ಘಟನೆ ವಿವಿರ:
ಅಡವಿಸಿದ್ದೇಶ್ವರ ಮಠಕ್ಕೆ ಬಂದಿದ್ದ ಬಾಗಲಕೋಟೆ ಮೂಲದ ಮಹಿಳೆ ಮತ್ತು ಮಗಳು, ರಾತ್ರಿ ಮಠದಲ್ಲೇ ತಂಗಿದ್ದರು. ಈ ವೇಳೆ ಮಹಿಳೆ ಸ್ವಾಮೀಜಿಯ ಕೊಠಡಿಯಲ್ಲಿ ಇದ್ದಾರೆಂದು ಆರೋಪಿಸಿದ ಯುವಕರು ಮಠಕ್ಕೆ ನುಗ್ಗಿ ಸ್ವಾಮೀಜಿಯನ್ನು ತಳ್ಳಿ ಮಹಿಳೆ ಮತ್ತು ಆಕೆಯ ಅಪ್ರಾಪ್ತ ಮಗಳ ಜೊತೆಗೆ ಅಸಭ್ಯವಾಗಿ ವರ್ತಿಸಿದ್ದಾರೆ. ಬಾಲಕಿಯ ಬಟ್ಟೆ ಹರಿದು ಎಳೆದಾಡಿದ್ದಾರೆ. ರಕ್ಷಣೆಗೆ ನಿಂತ ಸ್ವಾಮೀಜಿಗೆ ಯುವಕರು ಕಪಾಳಮೋಕ್ಷ ಮಾಡಿದ್ದಾರೆ ಎನ್ನಲಾಗಿದೆ.
ಮಾಹಿತಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಮೂಡಲಗಿ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿ ಮಹಿಳೆಗೆ ಬುದ್ಧಿವಾದ ಹೇಳಿ ಕಳುಹಿಸಿದ್ದಾರೆ. ಇತ್ತ ಗ್ರಾಮಸ್ಥರು ರಾತ್ರಿಯೇ ಅಡವಿಸಿದ್ದರಾಮ ಸ್ವಾಮೀಜಿಯನ್ನು ಮಠದಿಂದ ಹೊರಹಾಕಿದ್ದು, ಸದ್ಯ ಮೂವರೂ ಬೆಳಗಾವಿ ಜಿಲ್ಲೆಯ ಗೋಕಾಕ್ ನಲ್ಲಿದ್ದಾರೆ ಎಂದು ತಿಳಿದು ಬಂದಿದೆ.
ಇತ್ತೀಚೆಗೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಮೇಕಳಿ ಗ್ರಾಮದಲ್ಲಿ ರಾಮ ಮಂದಿರದ ಮಠ ಕಟ್ಟಿಕೊಂಡು ವಾಸವಿದ್ದ ಹಠಯೋಗಿ ಲೋಕೇಶ್ವರ ಸ್ವಾಮೀಜಿ ಅಪ್ರಾಪ್ತ ಬಾಲಕಿಯನ್ನು ಕಿಡ್ನ್ಯಾಪ್ ಮಾಡಿ ಆಕೆಯ ಮೇಲೆ ಅತ್ಯಾಚಾರವೆಸಗಿರುವಂತಹ ಘಟನೆ ನಡೆದಿತ್ತು. ಬಳಿಕ ಪೊಲೀಸರು ಸ್ವಾಮೀಜಿಯನ್ನು ಬಂಧಿಸಿದ್ದರು.