×
Ad

ಬೆಳಗಾವಿ | ಜೈಲುಪಾಲಾಗಿರುವ ಸ್ವಾಮೀಜಿಯ ಪ್ರವಚನದಿಂದ ಪ್ರೇರಣೆ: ಪ್ರಾಣತ್ಯಾಗಕ್ಕೆ ಮುಂದಾದ 21 ಮಂದಿ!

ಅಧಿಕಾರಿಗಳ ಮನವೊಲಿಕೆಯಿಂದ ಮನ ಪರಿವರ್ತನೆ

Update: 2025-08-26 15:59 IST
ಸಂತ್ರಸ್ತರು

ಬೆಳಗಾವಿ: ಹರ್ಯಾಣದ ವಿವಾದಾತ್ಮಕ ಸಂತ ರಾಮಪಾಲ್ ಪ್ರವಚನ ಹಾಗೂ ಆತನ ಪುಸ್ತಕಗಳಿಂದ ಪ್ರೇರಣೆಗೊಳಗಾದ 21 ಮಂದಿ ದೇಹತ್ಯಾಗ (ಪ್ರಾಣತ್ಯಾಗ) ಮಾಡಲು ನಿರ್ಧರಿಸಿದ ಆಘಾತಕಾರಿ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಅನಂತಪುರ ಗ್ರಾಮದಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.

ಅನಂತಪುರ ಗ್ರಾಮದ ಇರಕರ ಕುಟುಂಬದ ತುಕಾರಾಮ, ಸಾವಿತ್ರಿ, ರಮೇಶ್, ವೈಷ್ಣವಿ ಸೇರಿದಂತೆ 10ಕ್ಕೂ ಹೆಚ್ಚು ಮಂದಿ ಈ ನಿರ್ಧಾರಕ್ಕೆ ಬಂದಿದ್ದರು. ಇವರ ಜೊತೆಗೆ ಉತ್ತರ ಪ್ರದೇಶದ 11 ಮಂದಿಯೂ ಇದೇ ನಿರ್ಧಾರ ತೆಗೆದುಕೊಂಡಿದ್ದರೆನ್ನಲಾಗಿದೆ. ಇವರೆಲ್ಲರು ಸೆಪ್ಟಂಬರ್ 8ರಂದು ದೇಹತ್ಯಾಗ ಮಾಡಲು ಸಿದ್ಧರಾಗಿದ್ದರು ಎಂದು ತಿಳಿದು ಬಂದಿದೆ.

2014ರ ಗಲಭೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿ ಜೈಲಿನಲ್ಲಿರುವ ಸಂತ ರಾಮಪಾಲ್ ನ ಚಿಂತನೆಗಳಿಂದ ಪ್ರೇರಿತರಾಗಿರುವ ಈ 21 ಮಂದಿ, “ಪರಮಾತ್ಮ ಬರ್ತಾನೆ, ನಮ್ಮ ಪ್ರಾಣ ತೆಗೆದುಕೊಂಡು ಹೋಗ್ತಾನೆ”ಎಂಬ ಮೂಢನಂಬಿಕೆಯಲ್ಲಿ ಮುಳುಗಿದ್ದರು ಎನ್ನಲಾಗಿದೆ.

ಈ ವಿಷಯ ತಿಳಿಯುತ್ತಲೇ ಚಿಕ್ಕೋಡಿ ಉಪವಿಭಾಗಾಧಿಕಾರಿ ಸುಭಾಷ್ ಸಂಪಗಾವಿ ಅನಂತಪುರ ಗ್ರಾಮಕ್ಕೆ ಭೇಟಿ ನೀಡಿ, ಮೂಡನಂಬಿಕೆಯಿಂದ ಜೀವ ಕಳೆದುಕೊಳ್ಳಲು ಮುಂದಾಗಿದ್ದವರ ಜೊತೆ ಮಾತುಕತೆ ನಡೆಸಿದರು. ಪೊಲೀಸರು ಹಾಗೂ ಸ್ಥಳೀಯ ಮಠಾಧೀಶರು ಕೂಡಾ ಜೊತೆಗೂಡಿ ಮನವೊಲಿಸಿದರು. ಇವರ ಮಾತುಕತೆಯಿಂದ ವಾಸ್ತವ ವಿಚಾರ ಅರಿತ 21 ಮಂದಿ ತಮ್ಮ ನಿರ್ಧಾರದಿಂದ ಹಿಂದೆ ಸರಿದರು ಎಂದು ತಿಳಿದು ಬಂದಿದೆ.

“21ನೇ ಶತಮಾನದಲ್ಲೂ ಇಂತಹ ಮೂಢನಂಬಿಕೆಗಳು ಸಮಾಜಕ್ಕೆ ಕೆಟ್ಟ ಸಂದೇಶ ರವಾನಿಸುತ್ತದೆ. ಭಕ್ತಿ ಅಂದರೆ ಒಳಗಿನ ಅರಿವು ಜಾಗೃತವಾಗಿಡುವುದು. ದೇವರ ಹೆಸರಲ್ಲಿ ಪ್ರಾಣತ್ಯಾಗ ಮಾಡಲು ಮುಂದಾಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು” ಎಂದು ಉಪವಿಭಾಗಾಧಿಕಾರಿ ಸುಭಾಷ್ ಸಂಪಗಾವಿ ಎಚ್ಚರಿಕೆ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News