×
Ad

ಕರ್ನಲ್ ಸೋಫಿಯಾ ಖುರೇಶಿ ಪತಿಯ ಮನೆ ಮೇಲೆ ಆರೆಸ್ಸೆಸ್‌ ದಾಳಿ ಸುಳ್ಳು ಸುದ್ದಿ : ಬೆಳಗಾವಿ ಎಸ್ಪಿ ಭೀಮಾಶಂಕರ್ ಗುಳೇದ್ ಸ್ಪಷ್ಟನೆ

Update: 2025-05-14 13:24 IST

 ಕರ್ನಲ್ ಸೋಫಿಯಾ ಖುರೇಶಿ ( PC : PTI)

ಬೆಳಗಾವಿ : ಪಹಲ್ಗಾಮ್‌ ಭಯೋತ್ಪಾದನಾ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ನಡೆಸಿದ ಯಶಸ್ವಿ ʼಆಪರೇಷನ್ ಸಿಂಧೂರʼ ಕಾರ್ಯಾಚರಣೆಯ ಮಾಹಿತಿ ಜಗತ್ತಿಗೆ ತೆರೆದಿಟ್ಟ ಕರ್ನಲ್ ಸೋಫಿಯಾ ಖುರೇಶಿ ಅವರ ಕುರಿತು ಸುಳ್ಳು ಸುದ್ದಿಯೊಂದು ವೈರಲ್ ಆಗಿದ್ದು, ಕರ್ನಲ್ ಸೋಫಿಯಾ ಅವರ ಪತಿ ಮನೆಯ ಮೇಲೆ ಆರೆಸ್ಸೆಸ್‌ ದಾಳಿ ಮಾಡಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲಾಗಿದೆ. ಆದರೆ ಇದು ಸಂಪೂರ್ಣ ಸುಳ್ಳು ಸುದ್ದಿ ಎಂದು ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ್ ಗುಳೇದ್ ಸ್ಪಷ್ಟನೆ ನೀಡಿದ್ದಾರೆ.​

ಗೋಕಾಕ್ ತಾಲೂಕಿನ ಕೊಣ್ಣೂರು ಗ್ರಾಮದಲ್ಲಿ‌ರುವ ಕರ್ನಲ್ ಸೋಫಿಯಾ ಅವರ ಪತಿಯ ನಿವಾಸದ ಮೇಲೆ ದಾಳಿ ಮಾಡಲಾಗಿದೆ ಎಂದು ಅನೀಸ್ ಉದ್ದೀನ್ ಎಂಬ ಹೆಸರಿನ ಎಕ್ಸ್ ಖಾತೆಯಿಂದ ಪೋಸ್ಟ್ ಹಾಕಲಾಗಿತ್ತು. ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು.

ಈ ಕುರಿತು ಸ್ಪಷ್ಟನೆ ನೀಡಿರುವ ಎಸ್ಪಿ ಭೀಮಾಶಂಕರ್‌ ಗುಳೇದ್‌, ಕರ್ನಲ್​ ಸೋಫಿಯಾ ಖುರೇಶಿ ಅವರ ಮಾವನ ಮನೆ ಮೇಲೆ ಆರೆಸ್ಸೆಸ್‌​ ನೇತೃತ್ವದಲ್ಲಿ ದಾಳಿ ಆಗಿದೆ ಎಂದು ಸುಳ್ಳು ಸುದ್ದಿಯನ್ನು ಹರಿಬಿಡಲಾಗಿದೆ. ಇಂತಹ ಸುಳ್ಳು ಸುದ್ದಿಗಳಿಗೆ ಸಾರ್ವಜನಿಕರು ಕಿವಿಗೊಡಬಾರದು ಎಂದು ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಡುತ್ತಿದ್ದಂತೆ ಬೆಳಗಾವಿ ಜಿಲ್ಲಾ ಪೊಲೀಸರು, ಕೊಣ್ಣೂರಿನಲ್ಲಿರುವ ಕರ್ನಲ್ ಸೋಫಿಯಾ ಖುರೇಶಿ ಅವರ ಮಾವ ಗೌಸಸಾಬ್ ಬಾಗೇವಾಡಿ ಅವರ ಮನೆಗೆ ಭದ್ರತೆ ನೀಡಿದ್ದಾರೆ.

ಗೋಕಾಕ್ ಸಿಪಿಐ ಸುರೇಶ ಆರ್.ಬಿ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News