ಬಸವಣ್ಣನವರು ಲಿಂಗಾಯತ ಧರ್ಮವನ್ನು ಸ್ಥಾಪನೆ ಮಾಡಿಲ್ಲ : ಬಸನಗೌಡ ಪಾಟೀಲ್ ಯತ್ನಾಳ್
ಚಿಕ್ಕೋಡಿ : "ಬಸವಣ್ಣನವರು ಹಿಂದೂ ಸಮಾಜದಲ್ಲಿದ್ದ ಮೂಢನಂಬಿಕೆ ವಿರುದ್ಧ ಹೋರಾಡಿದರು. ಆದರೆ ಅವರು ಹೊಸ ಧರ್ಮ ಸ್ಥಾಪನೆ ಮಾಡಲಿಲ್ಲ. ಕೆಲವರು ವೀರಶೈವ–ಲಿಂಗಾಯತ ಧರ್ಮವನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ" ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಶನಿವಾರ ಚಿಕ್ಕೋಡಿ ತಾಲೂಕು ಹಾರೂಗೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಧರ್ಮ ಎಂದರೆ ಹಿಂದೂ ಎಂದು ಬರೆಯಬೇಕು, ಜಾತಿ ಇದ್ದಲ್ಲಿ ಲಿಂಗಾಯತ ಅಥವಾ ವೀರಶೈವ ಎಂದು ಬರೆಯಬೇಕು. ಆದರೆ ಧರ್ಮವೆಂದು ಲಿಂಗಾಯತ ಘೋಷಣೆ ಮಾಡುವುದರಿಂದ ಮುಂದಿನ ಪೀಳಿಗೆಯ ಭವಿಷ್ಯ ಹಾಳಾಗುತ್ತದೆ ಎಂದರು.
“ಕೇಂದ್ರ ಸರಕಾರ ವೀರಶೈವ–ಲಿಂಗಾಯತವನ್ನು ಪ್ರತ್ಯೇಕ ಧರ್ಮವೆಂದು ಘೋಷಣೆ ಮಾಡುವವರೆಗೂ ಆ ಹೆಸರು ಪ್ರಯೋಜನವಿಲ್ಲ. ಮೀಸಲಾತಿ ಪಡೆಯುವ ವೇಳೆ ಲಿಂಗಾಯತ ಅಥವಾ ವೀರಶೈವ ಪ್ರತ್ಯೇಕವಾಗಿ ಪರಿಗಣನೆಗೆ ಬರುವುದಿಲ್ಲ. ಸಂವಿಧಾನದಲ್ಲಿ ಹಿಂದೂ, ಕ್ರಿಶ್ಚಿಯನ್, ಮುಸ್ಲಿಂ, ಬೌದ್ಧ, ಸಿಖ್ ಮತ್ತು ಪಾರ್ಸಿ ಧರ್ಮಗಳಿಗೆ ಮಾತ್ರ ಅವಕಾಶ ಇದೆ” ಎಂದು ಹೇಳಿದರು.
ಸಿದ್ದರಾಮಯ್ಯನವರ ಬಗ್ಗೆಯೇ ಶಂಕೆ ಹುಟ್ಟಿದೆ. ಈಗಾಗಲೇ 400 ಕೋಟಿ ರೂಪಾಯಿ ನೀರಿನಲ್ಲಿ ಹಾಕಿದ್ದಾರೆ. ಜಾತಿ ಗಣತಿಯಲ್ಲಿ ಅವರ ಅವಧಿ ಮುಗಿಸಲು ಯತ್ನಿಸುತ್ತಿದ್ದಾರೆ ಎಂದರು.
ಇಂದು ಸರಕಾರ ಲಿಂಗಾಯತ, ಕುರುಬ, ಕ್ರಿಶ್ಚಿಯನ್ ಎಂಬಂತೆ ವಿಭಜಿಸಿ ಸಮಾಜಗಳನ್ನು ಒಡೆಯಲು ನೋಡುತ್ತಿದೆ. ಇದು ಕಾಂಗ್ರೆಸ್ ಕೇಂದ್ರ ಮಂಡಳಿಯಿಂದ ನಡೆಯುತ್ತಿರುವ ಸಂಚು. ಆದರೆ ಇದಕ್ಕೆ ಜನರು ಬಲಿಯಾಗುವುದಿಲ್ಲ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುವುದಿಲ್ಲ ಎಂದು ಭವಿಷ್ಯ ನುಡಿದರು.