ಬೆಳಗಾವಿ | ಕನ್ನಡ ರಾಜ್ಯೋತ್ಸವ ಮೆರವಣಿಗೆ ವೇಳೆ ದುಷ್ಕರ್ಮಿಗಳಿಂದ ಐವರಿಗೆ ಚಾಕು ಇರಿತ
ಬೆಳಗಾವಿ : ಕನ್ನಡ ರಾಜ್ಯೋತ್ಸವದ ಸಂಭ್ರಮದ ಮಧ್ಯೆ ಬೆಳಗಾವಿಯಲ್ಲಿ ಭಯಾನಕ ಘಟನೆ ನಡೆದಿದೆ. ಸದಾಶಿವನಗರದ ಚೆನ್ನಮ್ಮ ವೃತ್ತದ ಬಳಿ ರಾಜ್ಯೋತ್ಸವ ಅಂಗವಾಗಿ ನಡೆಯುತ್ತಿದ್ದ ರೂಪಕಗಳ ಮೆರವಣಿಗೆಯ ವೇಳೆ ಗುಂಪೊಂದು ದಾಳಿ ನಡೆಸಿ ಐವರಿಗೆ ಚಾಕು ಇರಿದಿರುವ ಘಟನೆ ನಗರದಲ್ಲಿ ಆತಂಕ ಸೃಷ್ಟಿಸಿದೆ.
ಪೊಲೀಸ್ ಮೂಲಗಳ ಪ್ರಕಾರ, ಗುರುನಾಥ ವಕ್ಕುಂದ, ಸಚಿನ್ ಕಾಂಬಳೆ, ಲೋಕೇಶ್ ಬೆಟಗೇರಿ, ವಿನಾಯಕ, ನಝೀರ್ ಪಠಾಣ್ ಗಾಯಗೊಂಡಿದ್ದಾರೆ. ಗಾಯಾಳುಗಳಲ್ಲಿ ಮೂವರನ್ನು ಬಿಮ್ಸ್ ಆಸ್ಪತ್ರೆಗೆ ಹಾಗೂ ಇಬ್ಬರನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ತಿಳಿದು ಬಂದಿದೆ.
ದಾಳಿ ನಡೆಸಿದ ದುಷ್ಕರ್ಮಿಗಳು ಚಾಕು ಸಮೇತ ಸ್ಥಳಕ್ಕೆ ಆಗಮಿಸಿ ಮೆರವಣಿಗೆಯ ನಡುವೆ ಏಕಾಏಕಿ ದಾಳಿ ನಡೆಸಿ ನಂತರ ಪರಾರಿಯಾದ್ದಾರೆ ಎನ್ನಲಾಗಿದೆ. ಘಟನೆ ಬೆಳಗಾವಿಯ ಎಪಿಎಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಧಾವಿಸಿ ತನಿಖೆ ಆರಂಭಿಸಿದ್ದಾರೆ.
ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದು, ದುಷ್ಕರ್ಮಿಗಳ ಪತ್ತೆಗೆ ಬೃಹತ್ ಶೋಧ ಕಾರ್ಯ ಆರಂಭವಾಗಿದೆ.