ಬೆಳಗಾವಿ | ಟನ್ ಕಬ್ಬಿಗೆ 3,300 ರೂ. ಘೋಷಣೆ; ಗುರ್ಲಾಪುರ ಕ್ರಾಸ್, ಹತ್ತರಗಿ ಟೋಲ್‌ಗೇಟ್ ಬಳಿ ರೈತರ ಸಂಭ್ರಮಾಚರಣೆ
ಬೆಳಗಾವಿ : ಕಬ್ಬು ಬೆಳೆಗಾರರ ಹೋರಾಟಕ್ಕೆ ರಾಜ್ಯ ಸರಕಾರ ಮಣಿದಿದ್ದು, ಪ್ರತೀ ಟನ್ ಕಬ್ಬಿಗೆ 3,300 ರೂ. ನೀಡಲು ಒಪ್ಪಿದೆ. ಈ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯ ಗುರ್ಲಾಪುರ ಕ್ರಾಸ್ ಹಾಗೂ ಹತ್ತರಗಿ ಟೋಲ್‌ಗೇಟ್ ಬಳಿ ರೈತರು ಸಂಭ್ರಮಾಚರಣೆ ನಡೆಸಿದರು.
ರೈತರು ಪಟಾಕಿ ಸಿಡಿಸಿ, ಪರಸ್ಪರ ಗುಲಾಲ್ ಬಣ್ಣ ಹಚ್ಚಿಕೊಂಡು ಸಂಭ್ರಮ ವ್ಯಕ್ತಪಡಿಸಿದರು. ‘‘ನಮ್ಮ ಹೋರಾಟ ವ್ಯರ್ಥವಾಗಿಲ್ಲ, ರೈತರ ಶ್ರಮಕ್ಕೆ ಸರಕಾರ ಸ್ಪಂದಿಸಿದೆ’’ ಎಂದು ಘೋಷಣೆ ಕೂಗಿದರು. ಹೋರಾಟದ ವೇದಿಕೆಯಲ್ಲಿ ನಾಯಕರು ರೈತರ ಏಕತೆ ಮತ್ತು ಶಾಂತ ಹೋರಾಟದ ಶೈಲಿಯನ್ನು ಮೆಚ್ಚಿ ಮಾತನಾಡಿದರು.
ಆದರೆ, ಸರಕಾರದ ಅಧಿಕೃತ ಆದೇಶ ಕೈಗೆ ಸಿಕ್ಕ ನಂತರವಷ್ಟೇ ಹೋರಾಟಕ್ಕೆ ಪೂರ್ಣ ವಿರಾಮ ನೀಡಲಾಗುವುದು ಎಂದು ರೈತ ಮುಖಂಡರು ಸ್ಪಷ್ಟಪಡಿಸಿದ್ದಾರೆ. ತಾತ್ಕಾಲಿಕವಾಗಿ ಹೋರಾಟ ನಿಲ್ಲಿಸಿದ ರೈತರು ಸರಕಾರದ ಆದೇಶದ ಪ್ರತಿ ಬಂದ ನಂತರ ಮುಂದಿನ ಕ್ರಮದ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದಾರೆ. ಈ ಹೋರಾಟ ರೈತರ ಒಗ್ಗಟ್ಟಿನ ನಿದರ್ಶನವಾಗಿ ಉಳಿದಿದ್ದು, ರಾಜ್ಯದಾದ್ಯಂತ ಕಬ್ಬು ಬೆಳೆಗಾರರ ಧ್ವನಿಗೆ ಸರಕಾರದಿಂದ ಸ್ಪಂದನೆ ಸಿಕ್ಕಂತಾಗಿದೆ.