ಬೆಳಗಾವಿ | ಭೀಕರ ರಸ್ತೆ ಅಪಘಾತ; ಒಂದೇ ಕುಟುಂಬದ ಮೂವರು ಮೃತ್ಯು
ಬೆಳಗಾವಿ : ಎರಡು ಕಾರುಗಳ ಮಧ್ಯೆ ಢಿಕ್ಕಿ ಸಂಭವಿಸಿ ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಮೃತಪಟ್ಟು, ಮೂವರು ಗಾಯಗೊಂಡಿರುವ ಘಟನೆ ಬೆಳಗಾವಿಯ ಚಿಕ್ಕಬಾಗೇವಾಡಿ ಗ್ರಾಮದ ಬಳಿ ಇಂದು ನಡೆದಿದೆ.
ಹಿರೇಬಾಗೇವಾಡಿ ಗ್ರಾಮದ ಅನಿಸ್ ಮುಸ್ತಾಕ ಸೈಯದ್, ಇವರ ಪತ್ನಿ ಅಯಿಮಾನ ಅನಿಸ್ ಸೈಯದ್ (24), ಮಗು ಅಹ್ಮದ್ ಅನಿಸ್ ಸೈಯದ್ (1.5) ಮೃತರು ಎಂದು ತಿಳಿದು ಬಂದಿದೆ. ಇನ್ನೊಂದು ಮಗು ತೀವ್ರ ಗಾಯಗೊಂಡಿದ್ದು, ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ಈ ನಾಲ್ವರು ಕಾರಿನಲ್ಲಿ ಗೋಕಾಕ್‌ನಿಂದ ಹಿರೇಬಾಗೇವಾಡಿ ಕಡೆಗೆ ಬರುತ್ತಿದ್ದರು. ಆಗ ಎದುರಿಗೆ ಎರಡು ಕಾರುಗಳು ಬರುತ್ತಿದ್ದವು. ಒಂದು ಕಾರು ಇನ್ನೊಂದನ್ನು ಹಿಂದಿಕ್ಕುವ ಭರದಲ್ಲಿ ಮೃತರ ಕಾರಿಗೆ ನೇರವಾಗಿ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಢಿಕ್ಕಿ ಹೊಡೆದ ಕಾರಿನಲ್ಲಿ ಸವದತ್ತಿ ಪರಸಗಡ ಕ್ಷೇತ್ರದ ಮಾಜಿ ಶಾಸಕ ಆರ್.ವಿ. ಪಾಟೀಲ್ ಅವರ ಕಾರು ಎಂದು ಬರೆದ ಪತ್ರ ಸಿಕ್ಕಿದೆ. ಇದರಲ್ಲಿದ್ದ ಮಾಜಿ ಶಾಸಕರ ಪುತ್ರ ಹಾಗೂ ಇನ್ನೊಬ್ಬ ಸವಾರನಿಗೂ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.
ಘಟನೆ ಸಂಬಂಧ ಹಿರೇಬಾಗೇವಾಡಿ ಮತ್ತು ಬೈಲಹೊಂಗಲ ಪೊಲೀಸರು ಪರಿಶೀಲನೆ ನಡೆಸಿದ್ದಾರೆ