ಬೆಳಗಾವಿ | ದನದ ಶೆಡ್ಗೆ ಮಂಜೂರಾಗದ ಹಣ; ಪಂಚಾಯತ್ ಕಚೇರಿಯೊಳಗೆ ಎಮ್ಮೆ ಕಟ್ಟಿದ ರೈತ!
ಬೆಳಗಾವಿ : ದನದಕೊಟ್ಟಿಗೆ ನಿರ್ಮಾಣದ ಹಣ ಮಂಜೂರಾಗದ ಹಿನ್ನೆಲೆಯಲ್ಲಿ ಬೇಸತ್ತ ರೈತರೊಬ್ಬರು ಗ್ರಾಮ ಪಂಚಾಯತ್ ಕಚೇರಿಯೊಳಗೆ ಎಮ್ಮೆ ಕಟ್ಟಿ ಆಕ್ರೋಶ ವ್ಯಕ್ತಪಡಿಸಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸಂಬರಗಿ ಗ್ರಾಮದಲ್ಲಿ ಘಟನೆ ನಡೆದಿದೆ.
ಗ್ರಾಮ ಪಂಚಾಯತ್ ಒಳಗೆ ಸತೀಶ್ ಕೋಳಿ ಎಂಬ ರೈತ ಎಮ್ಮೆ ಕಟ್ಟಿ ಆಕ್ರೋಶ ಹೊರಹಾಕಿದ್ದಾರೆ. 'ಕಳೆದ ವರ್ಷ ಗ್ರಾಮ ಪಂಚಾಯತ್ ವತಿಯಿಂದ ದನದ ಕೊಟ್ಟಿಗೆ ನಿರ್ಮಾಣಕ್ಕೆ ಮಂಜೂರಾತಿ ನೀಡಿದ್ದರು. ಆದರೆ, ನಿರ್ಮಾಣ ಮಾಡಿ ವರ್ಷ ಕಳೆದರೂ ಇದುವರೆಗೂ ಹಣ ಬಾರದೇ ಇರುವುದಕ್ಕೆ ಆಕ್ರೋಶಗೊಂಡು ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸಿರುವುದಾಗಿ' ಅವರು ದೂರಿದ್ದಾರೆ.
ʼಸರಕಾರ ರೈತರಿಗೆ ಅನುಕೂಲವಾಗಲಿ ಎಂದು ಹಲವು ಯೋಜನೆ ರೂಪಿಸಿದೆ. ಆದರೆ, ನನಗೆ ಕಳೆದ ವರ್ಷ ಸಂಬರಗಿ ಗ್ರಾಮ ಪಂಚಾಯತ್ನಿಂದ 50 ಸಾವಿರ ರೂ. ವೆಚ್ಚದ ದನದ ಶೆಡ್ ನಿರ್ಮಾಣಕ್ಕೆ ಅನುಮತಿ ನೀಡಿದ್ದರು. ಆದರೆ, ನಿರ್ಮಾಣ ಮಾಡಿ ಒಂದು ವರ್ಷ ಕಳೆದರೂ ಇದುವರೆಗೆ ಹಣ ಬಿಡುಗಡೆ ಮಾಡಿಲ್ಲ. ಅಧಿಕಾರಿಗಳನ್ನು ಕೇಳಿದರೆ ನಿಮಗೆ ಮಂಜೂರು ಮಾಡಿರುವ ಯೋಜನೆ ರದ್ದಾಗಿದೆ ಎಂದು ಹೇಳುತ್ತಾರೆ. ನಿರ್ಮಾಣ ಸಮಯದಲ್ಲಿ ಇಂಜಿನಿಯರ್ ಬಂದು ಫೋಟೋ ತೆಗೆದುಕೊಂಡು ಹೊಗಿದ್ದಾರೆ, ನಾನು ಸಾಲ ಸೋಲ ಮಾಡಿ ಇದನ್ನು ನಿರ್ಮಾಣ ಮಾಡಿದ್ದೇನೆ. ಸಾಲ ಕೊಟ್ಟವರು ಹಣ ಕೇಳುತ್ತಿದ್ದಾರೆ, ನಾನು ಎಲ್ಲಿಂದ ಹಣ ಕೊಡಲಿ, ಅಧಿಕಾರಿಗಳು ತಕ್ಷಣ ಹಣ ಬಿಡುಗಡೆ ಮಾಡಬೇಕುʼ ಎಂದು ಸಮಾಧಾನ ಹೊರಹಾಕಿದರು.
ಸಂಬರಗಿ ಗ್ರಾಮ ಪಂಚಾಯತ್ ಕಚೇರಿ ಒಳಗಿನ ಕಿಟಕಿಗೆ ರೈತ ಎಮ್ಮೆ ಕಟ್ಟಿದ್ದಾರೆ. ಜೊತೆಗೆ ಅಲ್ಲೇ ಎಮ್ಮೆಗೆ ಮೇವು ಹಾಕಿ ಗ್ರಾ.ಪಂ. ಅಧಿಕಾರಿಗಳಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಘಟನೆ ಮಾಹಿತಿ ಅರಿತು ಅಥಣಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಗೊಂದಲಸರಿಪಡಿಸಿದರು.