ಬೆಳಗಾವಿ | ಮಾರ್ಕಂಡೇಯ ನದಿಯಲ್ಲಿ ಈಜಲು ಹೋದ ಯುವಕ ನೀರುಪಾಲು
Update: 2025-08-28 13:09 IST
ಬೆಳಗಾವಿ: ಮಾರ್ಕಂಡೇಯ ನದಿಯಲ್ಲಿ ಈಜಲು ಹೋದ ಯುವಕ ನೀರುಪಾಲಾದ ಘಟನೆ ಗೋಕಾಕ ತಾಲೂಕಿನ ಯೋಗಿಕೊಳ್ಳದ ಬಳಿ ಬುಧವಾರ ಸಂಜೆ ನಡೆದಿದೆ.
ನೀರುಪಾಲಾದ ಯುವಕನನ್ನು ಧೀರಜ್ ಸಿಂಗ್ (23) ಎಂದು ಗುರುತಿಸಲಾಗಿದೆ.
ಉತ್ತರಾಖಾಂಡ ಮೂಲದ ಧೀರಜ್, ಗೋಕಾಕದಲ್ಲಿರುವ ಸ್ಪೈಸ್ ಗಾರ್ಡನ್ ಹೊಟೇಲ್ ನಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ನಿನ್ನೆ ಸಂಜೆ ಸ್ನೇಹಿತರೊಂದಿಗೆ ನದಿಗೆ ತೆರಳಿದ್ದ ಧೀರಜ್ ಈಜುವ ವೇಳೆ ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆ ಎಂದು ತಿಳಿದು ಬಂದಿದೆ.
ಘಟನೆ ಬಳಿಕ ಗೋಕಾಕ ಗ್ರಾಮೀಣ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ತಕ್ಷಣವೇ ಹುಡುಕಾಟ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದು, ನಿನ್ನೆ ಸಂಜೆಯಿಂದ ನಿರಂತರವಾಗಿ ಶೋಧ ಕಾರ್ಯ ಮುಂದುವರೆದಿದ್ದು, ಇನ್ನೂ ಯುವಕ ಪತ್ತೆಯಾಗಿಲ್ಲ ಎಂದು ತಿಳಿದು ಬಂದಿದೆ.
ಸ್ಥಳೀಯರು ಪ್ರವಾಹಾವಸ್ಥೆಯ ನದಿಯಲ್ಲಿ ಈಜುವಂತಹ ಸಾಹಸಕ್ಕೆ ಹೋಗಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.