ಬೆಳಗಾವಿ | ಯುವ ಗಾಯಕನ ಭೀಕರ ಹತ್ಯೆ; ಕೇವಲ 5 ಸಾವಿರ ರೂ.ಗೆ ನಡೆದ ಕೊಲೆ?
ಮಾರುತಿ ಅಡಿವೆಪ್ಪ ಲಠ್ಠೆ
ಬೆಳಗಾವಿ : ಯುವ ಗಾಯಕನೊಬ್ಬನನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಬೆಳಗಾವಿಯ ರಾಯಬಾಗ ತಾಲೂಕಿನ ಬೂದಿಹಾಳ ಗ್ರಾಮದ ಬಳಿ ನಡೆದಿರುವುದಾಗಿ ವರದಿಯಾಗಿದೆ.
ಮೃತ ಗಾಯಕನ್ನು ಮಾರುತಿ ಅಡಿವೆಪ್ಪ ಲಠ್ಠೆ ಎಂದು ಗುರುತಿಸಲಾಗಿದೆ. ಕೇವಲ 5 ಸಾವಿರ ಕೊಡುವುದಕ್ಕೆ ವಿಳಂಬವಾದ ಕಾರಣ ಅದೇ ದ್ವೇಷದಲ್ಲಿ ಯುವ ಗಾಯಕನ್ನು ಹತ್ಯೆ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಮಾರುತಿ ತನ್ನ ಇಬ್ಬರು ಗೆಳೆಯರೊಂದಿಗೆ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಆರೋಪಿ ಈರಪ್ಪ ಎಂಬಾತ ಗುಂಪು ಕಟ್ಟಿಕೊಂಡು ಬಂದು ಬೈಕನ್ನು ಅಡ್ಡಗಟ್ಟಿ ಮಚ್ಚಿನಿಂದ ಹಲ್ಲೆ ನಡೆಸಿ, ಬಳಿಕ ಕಾರು ಹಾಯಿಸಿ ಭೀಕರವಾಗಿ ಹತ್ಯೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಕಬ್ಬು ಕಟಾವು ಮಾಡುವ ಗುಂಪಿನಲ್ಲಿ ಕೆಲಸ ಮಾಡುವ ನಿಟ್ಟಿನಲ್ಲಿ ಮೃತ ಗಾಯಕ ಮಾರುತಿ, ಆರೋಪಿ ಈರಪ್ಪ ಅಕ್ಕಿವಾಟೆ ಬಳಿ ಸುಮಾರು 50 ಸಾವಿರ ರೂ. ಸಾಲ ಪಡೆದಿದ್ದ ಎನ್ನಲಾಗಿದೆ. ಬಳಿಕ ಕೆಲವು ದಿನಗಳ ಕಾಲ ಕೆಲಸ ಮಾಡಿದ್ದ ಮಾರುತಿ, ನಂತರ 45 ಸಾವಿರ ರೂ. ವಾಪಸ್ ನೀಡಿದ್ದ ಎನ್ನಲಾಗಿದೆ. ನಂತರ ಹೆಚ್ಚೆಚ್ಚು ಹಾಡು ಹಾಡುವುದನ್ನು ಮುಂದುವರಿಸಿದ ಮಾರುತಿ, ಕಬ್ಬು ಕಟಾವು ಮತ್ತು ಕಾರ್ಖಾನೆಗೆ ಸಾಗಣೆ ಮಾಡುವ ಗುಂಪಿನ ಕೆಲಸವನ್ನು ಬಿಟ್ಟು ಸಂಗೀತದ ಕಡೆಗೆ ಹೆಚ್ಚಿನ ಗಮನ ಹರಿಸಿದ್ದ. ಇದೇ ವೇಳೆ ಹಣವನ್ನು ಮರಳಿಸದ ಕಾರಣ ಕೋಪಗೊಂಡ ಈರಪ್ಪ ಹಾಗೂ ಆತನ ಗುಂಪು, ಮಾರುತಿಯನ್ನು ಕೊಲ್ಲುವ ತೀರ್ಮಾನಕ್ಕೆ ಬಂದಿದ್ದಾರೆ. ಶುಕ್ರವಾರ, ಮಾರುತಿ ತನ್ನ ಸ್ನೇಹಿತನೊಂದಿಗೆ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ದುಷ್ಕರ್ಮಿಗಳು ರಸ್ತೆಯನ್ನು ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಹತ್ಯೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಹತ್ಯೆ ವೇಳೆ ಮಾರುತಿಗೆ ಕಾರು ಹರಿಸಿದ ದುಷ್ಕರ್ಮಿಗಳ ಕಾರು ಕೂಡ ಪಲ್ಟಿಯಾಗಿದ್ದು, ಕೆಲವರು ಗಾಯಗೊಂಡಿದ್ದಾರೆ. ಈ ಸಮಯ ಗಾಯಗೊಂಡ ಆರೋಪಿ ಈರಪ್ಪ ಅಕ್ಕಿವಾಟೆಗೆ ಗೋಕಾಕ್ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ಘಟನೆ ಸಂಬಂಧ ರಾಯಬಾಗ ಪೊಲೀಸ್ ಠಾಣೆಯಲ್ಲಿ11 ಜನರ ವಿರುದ್ಧ ಪ್ರಕರಣ ದಾಖಲಾಗಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.