×
Ad

ಬೆಳಗಾವಿ | ಅನಧಿಕೃತ ಚರ್ಮ ರೋಗ ಚಿಕಿತ್ಸಾ ಕೇಂದ್ರಗಳ ಮೇಲೆ ಆರೋಗ್ಯ ಇಲಾಖೆ ದಾಳಿ

10 ಕೇಂದ್ರಗಳನ್ನು ಸೀಝ್‌ ಮಾಡಿದ ಅಧಿಕಾರಿಗಳು

Update: 2025-08-15 16:22 IST

 ಜಿಲ್ಲಾಧಿಕಾರಿ ಮುಹಮ್ಮದ್ ರೋಷನ್

ಬೆಳಗಾವಿ : ಬೆಳಗಾವಿಯಲ್ಲಿರುವ ಅನಧಿಕೃತ ಚರ್ಮ ರೋಗ ಚಿಕಿತ್ಸಾ ಕೇಂದ್ರಗಳ‌ ಮೇಲೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ಇಂದು(ಆ.15) ದಾಳಿ ನಡೆಸಿದ್ದು, 10 ಕೇಂದ್ರಗಳನ್ನು ಸೀಝ್‌ ಮಾಡುವ ಮೂಲಕ ಮಾಲಕರಿಗೆ ಬಿಸಿ ಮುಟ್ಟಿಸಿದ್ದಾರೆ.

ದಾಳಿ ವೇಳೆ 10 ಕೇಂದ್ರಗಳನ್ನು ಸೀಝ್‌ ಮಾಡಿದ್ದರೆ, 7 ಕೇಂದ್ರಗಳಿಗೆ ನೋಟಿಸ್ ನೀಡಲಾಗಿದೆ. ಅದೇ ರೀತಿ 7 ಕೇಂದ್ರಗಳು ಬಾಗಿಲು ತೆರೆದಿರಲಿಲ್ಲ. 6 ಕೇಂದ್ರಗಳಲ್ಲಿ ಯಾವುದೇ ನ್ಯೂನತೆಗಳು ಕಂಡು ಬಂದಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ಕುರಿತು ಜಿಲ್ಲಾಧಿಕಾರಿ ಮುಹಮ್ಮದ್ ರೋಷನ್ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಬೆಳಗಾವಿಯಲ್ಲಿ ಸಣ್ಣ ಸಣ್ಣ ಅಂಗಡಿಗಳಲ್ಲಿ ಡರ್ಮಟೊಲಾಜಿಕಲ್ ಚಿಕಿತ್ಸೆ ನೀಡುತ್ತೇವೆ ಎಂದು ಬೋರ್ಡ್ ಹಾಕಿಕೊಂಡು ಪ್ಲಾಸ್ಮಾ ಥೆರಪಿ, ಹೇರ್ ಪ್ಲಾಂಟ್ ಸರ್ಜರಿ ಮತ್ತು ಲೇಸರ್ ಚಿಕಿತ್ಸೆ ಸೇರಿ ಮತ್ತಿತರ ಸರ್ಜರಿ ಮಾಡುತ್ತಿರುವ ಬಗ್ಗೆ ಡರ್ಮಟೊಲಾಜಿಕಲ್ ಅಸೊಸಿಯೇಷನ್ ಸೇರಿದಂತೆ ಹಲವು ವೈದ್ಯರಿಂದ ಈ ಸಂಬಂಧ ದೂರು ಕೇಳಿ ಬಂದಿದ್ದವು. ಹಾಗಾಗಿ, ಸುಮಾರು 30 ಕಡೆಗಳಲ್ಲಿ ಕೆಪಿಎಂಇ ಕಾನೂನಿನ ಅಡಿಯಲ್ಲಿ ದಾಳಿ ಮಾಡಲಾಗಿದೆ ಎಂದರು.

ಆರೋಗ್ಯ ಇಲಾಖೆ ಅಧಿಕಾರಿಗಳು 30 ಸ್ಥಳಗಳಲ್ಲಿ 30 ತಂಡಗಳು ದಾಳಿ ಮಾಡಿ ಪರಿಶೀಲನೆ ಮಾಡಿದ್ದಾರೆ. ಇಲ್ಲಿ ಏನೇನು ಸಾಕ್ಷ್ಯಗಳು ಸಿಗುತ್ತವೆ ಎಂಬ ಬಗ್ಗೆ ಒಂದು ಪ್ರಾಥಮಿಕ‌ ವರದಿ ತರಿಸಿಕೊಂಡು, ಅವುಗಳ ಬಗ್ಗೆ ನನ್ನ ಅಧ್ಯಕ್ಷತೆಯ ಕೆಪಿಎಂಇ ಕೋರ್ಟ್ ನಲ್ಲಿ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.

ಯಾರು ಕಾನೂನು ಬಾಹಿರವಾಗಿ ಮತ್ತು ಬಹಿರಂಗವಾಗಿ ಕೆಲಸ ಮಾಡುತ್ತಿದ್ದಾರೋ, ಅವರಿಗೆ ಶಿಕ್ಷೆ ಕೊಡಿಸಲು ನಾವು ನಿರ್ಧರಿಸಿದ್ದೇವೆ. ಅಮಾಯಕ ಜನರ ಜೀವವನ್ನು ಈ ರೀತಿ ಅಪಾಯದ ಸ್ಥಿತಿಗೆ ನೂಕುವುದನ್ನು ನಾವು ಸಹಿಸುವುದಿಲ್ಲ. ಹೇರ್ ಕಟ್ ಮತ್ತು ಮೇಕಪ್ ಮಾಡುವುದನ್ನು ಬಿಟ್ಟರೆ ಈ ರೀತಿ ದೊಡ್ಡ ದೊಡ್ಡ ಸರ್ಜರಿ ಮಾಡಲು ಇವರಿಗೆ ಅನುಮತಿ ಇರುವುದಿಲ್ಲ. ಇದರಿಂದಾಗಿ ಅದೇಷ್ಟೊ ಜನರು ವ್ಯತಿರಿಕ್ತ ಪರಿಣಾಮ ಉಂಟಾಗಿ ಮೃತರಾಗುತ್ತಿದ್ದಾರೆ. ಆ ರೀತಿ ಸಾವು-ನೋವು ನಮ್ಮಲ್ಲಿ ಸಂಭವಿಸಬಾರದು ಎಂಬ ಉದ್ದೇಶದಿಂದ ಕಾರ್ಯಾಚರಣೆ ಕೈಗೊಂಡಿದ್ದೇವೆ ಎಂದು ಅವರು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News