ಬೆಳಗಾವಿ | ದುಷ್ಕರ್ಮಿಗಳಿಂದ ಮನೆಗೆ ನುಗ್ಗಿ ಮಾರಕಾಸ್ತ್ರಗಳಿಂದ ಹಲ್ಲೆ: ಅಂಗಡಿ, ವಾಹನಗಳ ಧ್ವಂಸ
ಬೆಳಗಾವಿ: ದುಷ್ಕರ್ಮಿಗಳ ತಂಡವು ಮನೆಯೊಂದಕ್ಕೆ ನುಗ್ಗಿ ಮನೆಮಂದಿಗೆ ಮಾರಕಾಸ್ತ್ರದಿಂದ ಹಲ್ಲೆಗೈದು, ಅಂಗಡಿ, ವಾಹನಗಳನ್ನು ಧ್ವಂಸಗೊಳಿಸಿ ಬೆಂಕಿ ಹಚ್ಚಿದ ಘಟನೆ ಅಥಣಿ ತಾಲೂಕಿನ ಸಂಬರಗಿಯಲ್ಲಿ ಸೋಮವಾರ ರಾತ್ರಿ ನಡೆದಿದೆ.
ಬಲವಂತ ಟೋಣೆ ಎಂಬವರ ಮನೆಗೆ ನುಗ್ಗಿ ಈ ದಾಂಧಲೆ ನಡೆಸಲಾಗಿದೆ. ಕೃತ್ಯ ತಡೆಯಲೆತ್ನಿಸಿದ ಬಲವಂತ ಟೋಣೆಯವರ ಸಹೋದರನ ಪುತ್ರ ಸಂಜಯ ಟೋಣೆಗೆ ದುಷ್ಕರ್ಮಿಗಳು ಹೊಟ್ಟೆಗೆ ಚಾಕುವಿನಿಂದ ಇರಿದಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಅವರನ್ನು ಮಹಾರಾಷ್ಟ್ರದ ಮೀರಜ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದೇ ವೇಳೆ ದುಷ್ಕರ್ಮಿಗಳು ಬಲವಂತ ಅವರ ಮಾಂಸ ಮಾರಾಟ ಅಂಗಡಿ ಹಾಗೂ ಮನೆ ಮುಂದೆ ನಿಲ್ಲಿಸಿದ್ದ ನಾಲ್ಕು ದ್ವಿಚಕ್ರ ವಾಹನಗಳನ್ನು ಧ್ವಂಸಗೊಳಿಸಿದ್ದಾರೆ ಅಲ್ಲದೇ, ಪಿಕಪ್ ವಾಹನಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ ಎಂದು ದೂರಲಾಗಿದೆ.
ದಾದಾ ಸಾಹೇಬ್ ಟೋಣೆ, ರವಿ ಮಿಸಾಳ, ರಮೇಶ ಬೋಸ್ಲೆ, ವಿಜಯ ನಾಟೇಕರ ಹಾಗೂ ಪಪ್ಪು ಬನ್ನೆ ಈ ಕೃತ್ಯ ಎಸಗಿರುವುದಾಗಿ ಪೊಲೀಸ್ ದೂರಿನಲ್ಲಿ ಆರೋಪಿಸಲಾಗಿದೆ.
ದುಷ್ಕೃತ್ಯವನ್ನು ತಡೆಯಲು ಮುಂದಾದ ಗ್ರಾಮಸ್ಥರಿಗೂ ದುಷ್ಕರ್ಮಿಗಳು ಬೆದರಿಕೆ ಹಾಕಿದ್ದಾರೆ. ಹಲ್ಲೆಯ ಸಂಪೂರ್ಣ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಈ ಕೃತ್ಯ ಎಸಗಲಾಗಿದೆ ಎಂದು ಹೇಳಲಾಗಿದೆ.
ಈ ಬಗ್ಗೆ ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.