×
Ad

ಬೆಳಗಾವಿ | ಶಾಲೆಯ ತರಗತಿ ಕೊಠಡಿಗಾಗಿ ಪ್ರತಿಭಟನೆ; ಶಿಕ್ಷಕ ಅಮಾನತು

Update: 2025-05-30 17:28 IST

ಬೆಳಗಾವಿ : ಇಲ್ಲಿನ ರಾಯಬಾಗ ತಾಲ್ಲೂಕಿನ ನಿಡಗುಂದಿ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ತರಗತಿ ಕೊಠಡಿಗಳ ಮಂಜೂರಾತಿಗಾಗಿ ಅಗ್ರಹಿಸಿ ಮೌನ ಪಾದಯಾತ್ರೆ ಹಾಗೂ ಉಪವಾಸ ಪ್ರತಿಭಟನೆ ನಡೆಸಿದ್ದ ಶಿಕ್ಷಕರೊಬ್ಬರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.

ವೀರಣ್ಣ ಮಡಿವಾಳರ ಎಂಬವರೇ ಅಮಾನತು ಆದ ಶಿಕ್ಷಕ.ʼಸರಕಾರಿ ನೌಕರನಾಗಿ ಇಲಾಖೆ ವಿರುದ್ಧ ಪ್ರತಿಭಟಿಸಿ, ಇಲಾಖೆ ಹಾಗೂ ಸರಕಾರಕ್ಕೆ ಮುಜುಗರ ಉಂಟು ಮಾಡಿದ್ದೀರಿ. ಈಗಾಗಲೇ ಎರಡು ಕೊಠಡಿ ಮಂಜೂರು ಆಗಿವೆ. ಶೀಘ್ರ ಕೆಲಸಗಳು ಆರಂಭವಾಗಲಿವೆ ಎಂದು ತಿಳಿ ಹೇಳಿದರೂ ಅನುಚಿತವಾಗಿ ವರ್ತಿಸಿದ್ದೀರಿ. ಎಲ್ಲದರ ಹಿನ್ನೆಲೆಯಲ್ಲಿ ಅಮಾನತು ಮಾಡಲಾಗಿದೆʼ ಎಂದು ರಾಯಬಾಗ ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜಪ್ಪ.ಆರ್ ಆದೇಶದಲ್ಲಿ ತಿಳಿಸಿದ್ದಾರೆ.

ನಿಡಗುಂದಿ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ 4 ಕೊಠಡಿಗಳನ್ನು ಮಂಜೂರಾತಿ ಮಾಡುವಂತೆ ಆಗ್ರಹಿಸಿ ಶಾಲೆಯ ಶಿಕ್ಷಕ ವೀರಣ್ಣ ಮಡಿವಾಳರ, ನಿಡಗುಂದಿ ಶಾಲೆಯಿಂದ ರಾಯಬಾಗ ಬಿಇಓ ಕಚೇರಿವರೆಗೆ ಪಾದಯಾತ್ರೆ ನಡೆಸಿದ್ದರು.

‘ಉಪವಾಸ ಕುಳಿತ ನನ್ನನ್ನು ತಾಲ್ಲೂಕಿನ ಬಿಇಓ ಶತ್ರುವಿನ ರೀತಿ ನಡೆಸಿಕೊಂಡಿದ್ದಾರೆ. ಏಕವಚನದಲ್ಲಿ ಸಂಬೋಧಿಸಿ ನನ್ನ ಮೇಲೆ ಕ್ರಮ ಕೈಗೊಳ್ಳುವುದಾಗಿ ಬೆದರಿಸಿದ್ದಾರೆ. ನನ್ನನ್ನು ಅಧಿಕಾರ ಬಲದ ಮುಂದೆ ಯಕಃಶ್ಚಿತ್ ಎನ್ನುವ ರೀತಿಯಲ್ಲಿ ನಡೆಸಿಕೊಳ್ಳಲಾಗಿದೆ. ಕ್ಷೇತ್ರಶಿಕ್ಷಣಾಧಿಕಾರಿ ನನ್ನನ್ನು ಏಕವಚನದಲ್ಲಿ ಸಂಬೋಧಿಸುವಾಗ ನನ್ನ ಎಂ.ಎ ಇಂಗ್ಲಿಷ್ ಪದವಿ ಮತ್ತು ಕೆಸೆಟ್ ಪ್ರಮಾಣಪತ್ರ ಮತ್ತು ಎಂ.ಎ ಕನ್ನಡ ಪದವಿ ಮತ್ತು ಕೆಸೆಟ್ ಪ್ರಮಾಣ ಪತ್ರಗಳು ನೆನಪಾಗಿ ಆಳದಲ್ಲಿ ನೊಂದಿದ್ದೇನೆ. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ನಿರರ್ಥಕ ಎನ್ನಿಸಿದವು’

-ವೀರಣ್ಣ ಮಡಿವಾಳರ, ಅಮಾನತುಗೊಂಡ ಶಿಕ್ಷಕ 

ಅಮಾನತು ಪ್ರಕರಣದ ತನಿಖೆಗೆ ಒತ್ತಾಯ

ತನ್ನ ಕರ್ತವ್ಯ ನಿರ್ವಹಿಸಿದ ಪ್ರಾಮಾಣಿಕ ಶಿಕ್ಷಕನನ್ನು ಅಮಾನತಿನಲ್ಲಿರಿಸಿ ಅಪಮಾನಿಸಿದ ಅಧಿಕಾರಿಯ ನಡೆ ತೀವ್ರ ಆಕ್ಷೇಪಾರ್ಹ. ಹೀಗಾಗಿ ಪ್ರಕರಣವನ್ನು ತನಿಖೆ ಮಾಡಲು ಆದೇಶ ಹೊರಡಿಸಬೇಕು ಎಂದು ಪ್ರಗತಿಪರ ಚಿಂತಕರಾದ ಡಾ.ಕೆ.ಮರುಳಸಿದ್ದಪ್ಪ, ಡಾ.ಜಿ.ರಾಮಕೃಷ್ಣ, ಡಾ.ವಿಜಯಾ, ಪ್ರೊ.ಎಸ್.ಜಿ.ಸಿದ್ದರಾಮಯ್ಯ, ವಿಮಲಾ ಕೆ.ಎಸ್, ಡಾ.ಮೀನಾಕ್ಷಿ ಬಾಳಿ, ಡಾ.ವಸುಂಧರಾ ಭೂಪತಿ, ಬಿ. ಶ್ರೀಪಾದ ಭಟ್, ಡಾ.ಬಂಜಗೆರೆ ಜಯಪ್ರಕಾಶ್, ಮಾವಳ್ಳಿ ಶಂಕರ್, ಟಿ.ಸುರೇಂದ್ರ ರಾವ್, ಡಾ.ಎನ್.ಗಾಯತ್ರಿ, ಡಾ.ವಿ.ಪಿ.ನಿರಂಜನಾರಾಧ್ಯ, ಜಾಣಗೆರೆ ವೆಂಕಟರಾಮಯ್ಯ, ಎನ್.ಕೆ.ವಸಂತ ರಾಜ್, ವಾಸುದೇವ ಉಚ್ಚಿಲ, ಕೆ.ನೀಲಾ, ಡಾ. ಬಿ.ಆರ್.ಮಂಜುನಾಥ್, ಡಾ. ಎಚ್.ಜಿ.ಜಯಲಕ್ಷೀ ರಾಜ್ಯ ಸರಕಾರವನ್ನು ಒತ್ತಾಯಿಸಿರುವುದಾಗಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News