ಬೆಳಗಾವಿ | ಹೆದ್ದಾರಿ ಕೆಲಸ ಮುಗಿಸಿ ತೆರಳುತ್ತಿದ್ದವರ ಮೇಲೆ ಹರಿದ ಟ್ಯಾಂಕರ್: ಮೂವರು ಮೃತ್ಯು, ನಾಲ್ವರಿಗೆ ಗಂಭೀರ ಗಾಯ
ಬೆಳಗಾವಿ: ರಾಷ್ಟ್ರೀಯ ಹೆದ್ದಾರಿಯ ದುರಸ್ತಿ ಕೆಲಸ ಮುಗಿಸಿಕೊಂಡು ಮನೆ ಕಡೆಗೆ ತೆರಳುತ್ತಿದ್ದ ಕಾರ್ಮಿಕರ ಮೇಲೆ ಟ್ಯಾಂಕರ್ ಹರಿದು ಸ್ಥಳದಲ್ಲೇ ಮೂವರು ಸಾವನ್ನಪ್ಪಿ, ಟ್ಯಾಂಕರ್ ಚಾಲಕ ಸೇರಿ ನಾಲ್ವರು ಗಾಯಗೊಂಡಿರುವ ದಾರುಣ ಘಟನೆ ಜಿಲ್ಲೆಯ ಕಿತ್ತೂರು ತಾಲೂಕಿನ ಇಟಗಿ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ರವಿವಾರ ನಡೆದಿದೆ.
ರಾಮಚಂದ್ರ ಜಾಧವ(45), ಇವರ ಪುತ್ರ ಮಹೇಶ ಜಾಧವ(18) ಹಾಗೂ ಮತ್ತೋರ್ವ ಕಾರ್ಮಿಕ ರಮೇಶ(38) ಮೃತಪಟ್ಟಿದ್ದು, ಭೀಮವ್ವ(55) ಎಂಬವರ ಎರಡು ಕಾಲುಗಳು ತುಂಡಾಗಿವೆ. ಘಟನೆಯಲ್ಲಿ ಲಕ್ಷ್ಮೀಬಾಯಿ ಜಾಧವ್(38), ಅನುಶ್ರೀ(18) ಹಾಗೂ ಮಂಗಳೂರು ಮೂಲದ ಟ್ಯಾಂಕರ್ ಚಾಲಕ ದಿನೇಶ (45) ಎಂಬುವರು ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುಗಳನ್ನು ಚಿಕಿತ್ಸೆಗಾಗಿ ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ರಾಷ್ಟ್ರೀಯ ಹೆದ್ದಾರಿಯ ದುರಸ್ತಿ ಕೆಲಸ ಮುಗಿಸಿಕೊಂಡು ಮನೆ ಕಡೆಗೆ ತೆರಳುತ್ತಿದ್ದವರ ಮೇಲೆ ಗೇರು ಬೀಜದ ಎಣ್ಣೆ ತುಂಬಿಕೊಂಡು ಚಲಿಸುತ್ತಿದ್ದ ಟ್ಯಾಂಕರ್ ಒಂದು ಚಾಲಕನ ನಿಯಂತ್ರಣ ತಪ್ಪಿ ಹರಿದಿದ್ದು, ಆ ಬಳಿಕ ಸರ್ವೀಸ್ ರಸ್ತೆಯಲ್ಲಿ ಪಲ್ಟಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ಹಾಗೂ ಕಿತ್ತೂರು ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಬಗ್ಗೆ ಕಿತ್ತೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ರವಿವಾರ ಬೆಳಗ್ಗೆ 7 ಗಂಟೆಗೆ ಕೆಲಸಕ್ಕೆ ಬಂದಿದ್ದೆವು. ಮಧ್ಯಾಹ್ನ 12ಕ್ಕೆ ಕೆಲಸ ಮುಗಿಸಿ ಮನೆಗೆ ಹೊರಟಿದ್ದೆವು. ಅಷ್ಟರಲ್ಲಿ ಟ್ಯಾಂಕರ್ ಚಾಲಕ ಫೋನಿನಲ್ಲಿ ಮಾತನಾಡುತ್ತಾ ಬಂದಿದ್ದಾನೆ. ನೋಡ ನೋಡುತ್ತಿದ್ದಂತೆ ಬಂದು ನಮಗೆ ಢಿಕ್ಕಿ ಹೊಡೆದಿದ್ದಾನೆ. ಅಪಘಾತದಲ್ಲಿ ನನ್ನ ಗಂಡ, ಮಗ ಮತ್ತು ಇನ್ನೊಬ್ಬರು ಮೃತಪಟ್ಟಿದ್ದಾರೆ. ಒಟ್ಟು 6 ಮಂದಿ ಕೆಲಸಕ್ಕೆ ಬಂದಿದ್ದೆವು. ಅದರಲ್ಲಿ ಮೂವರು ಮೃತಪಟ್ಟಿದ್ದಾರೆ. ನನಗೆ ಮತ್ತು ಇನ್ನಿಬ್ಬರಿಗೆ ಗಾಯವಾಗಿದೆ. ಕೆಲಸಕ್ಕೆ ಬಂದು 8 ತಿಂಗಳಾಗಿತ್ತು. ಈಗ ನನಗೆ ಆಸರೆಯಾಗಿದ್ದ ಗಂಡ ಮತ್ತು ಮಗ ನನ್ನನ್ನು ಅನಾಥರಾಗಿ ಮಾಡಿ ಹೋಗಿಬಿಟ್ಟರು’ ಎಂದು ಮೃತ ರಾಮಚಂದ್ರ ಜಾಧವ ಪತ್ನಿ ಗಾಯಾಳು ಲಕ್ಷ್ಮೀಬಾಯಿ ಅಳಲು ತೋಡಿಕೊಂಡಿದ್ದಾರೆ.