ಕರಾಳ ದಿನಾಚರಣೆ: 150 ಎಂಇಎಸ್ ಕಾರ್ಯಕರ್ತರ ವಿರುದ್ಧ ಎಫ್ಐಆರ್
ಬೆಳಗಾವಿ: ಕರ್ನಾಟಕ ರಾಜ್ಯೋತ್ಸವಕ್ಕೆ ಪ್ರತಿಯಾಗಿ ಕರಾಳ ದಿನ ಆಚರಿಸಿದ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್)ಯ 150 ಕಾರ್ಯಕರ್ತರ ವಿರುದ್ಧ ಮಾರ್ಕೆಟ್ ಠಾಣೆಯಲ್ಲಿ ಪೊಲೀಸರು ರವಿವಾರ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ಎಂಇಎಸ್ ಕಾರ್ಯಕರ್ತರು ಅನುಮತಿಯಿಲ್ಲದೆ ಕರಾಳ ದಿನ ಆಚರಿಸಿದ್ದಾರೆ. ಈ ವೇಳೆ ಎಂಇಎಸ್ ನಾಯಕರು ಹಾಗೂ ಕಾರ್ಯಕರ್ತರು ಮಹಾರಾಷ್ಟ್ರಕ್ಕೆ ಜಯಕಾರ ಕೂಗಿದ್ದರೆ, ಕರ್ನಾಟಕ ರಾಜ್ಯೋತ್ಸವದ ವಿರುದ್ಧ ನಾಡದ್ರೋಹಿ ಕೃತ್ಯ ಎಸಗಿದ್ದಾರೆ ಎಂದು ಆ ಆರೋಪ ಕೇಳಿಬಂದಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ 150ಕ್ಕೂ ಹೆಚ್ಚು ಎಂಇಎಸ್ ಕಾರ್ಯಕರ್ತರ ವಿರುದ್ಧ ಮಾರ್ಕೆಟ್ ಠಾಣೆಯ ಪಿಎಸ್ಸೈ ವಿಠ್ಠಲ ಹಾವನ್ನವರ ನೀಡಿದ ದೂರಿನಂತೆ ಎಫ್ಐಆರ್ ದಾಖಲಾಗಿದೆ. ದೂರಿನಲ್ಲಿ ಮನೋಹರ ಕಲ್ಲಾಪ ಸಹಿತ 36 ಮಂದಿಯ ಹೆಸರನ್ನು ಉಲ್ಲೇಖಿಸಲಾಗಿದ್ದು, 150ರಷ್ಟು ಮಂದಿ ಎಂಇಎಸ್ ಕಾರ್ಯಕರ್ತರು, ನಾಯಕರು ಭಾಗವಹಿಸಿರುವುದಾಗಿ ಉಲ್ಲೇಖಿಸಲಾಗಿದೆ.