×
Ad

ಕರ್ನಲ್ ಸೋಫಿಯಾ ಖುರೇಶಿ ಪತಿ ಮನೆ ಮೇಲೆ ಆರೆಸ್ಸೆಸ್ ದಾಳಿ ಎಂಬ ಸುಳ್ಳು ಪೋಸ್ಟ್ : ಎಫ್‍ಐಆರ್ ದಾಖಲು

Update: 2025-05-15 21:12 IST

 ಕರ್ನಲ್ ಸೋಫಿಯಾ ಖುರೇಶಿ ( PC : PTI)

ಬೆಳಗಾವಿ : ಕರ್ನಲ್ ಸೋಫಿಯಾ ಖುರೇಶಿ ಅವರ ಪತಿ ಮನೆ ಮೇಲೆ ಆರೆಸ್ಸೆಸ್ ದಾಳಿ ನಡೆಸಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹಬ್ಬಿಸಿದ್ದ ಆರೋಪದಡಿ ಅನೀಸ್ ಉದ್ದೀನ್ ಎಂಬಾತನ ವಿರುದ್ಧ ಬೆಳಗಾವಿಯ ಸಿಇಎನ್ ಪೊಲೀಸ್ ಠಾಣೆಯಲ್ಲಿ ಸ್ವಯಂಪ್ರೇರಿತ ಎಫ್‍ಐಆರ್ ದಾಖಲಾಗಿದೆ.

ಬೆಳಗಾವಿ ಜಿಲ್ಲಾ ಸಿಇಎನ್ ಠಾಣೆಯಲ್ಲಿ ಆರೋಪಿ ಅನೀಸ್ ಉದ್ದೀನ್ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಾಗಿದೆ. ಇತ್ತೀಚೆಗೆ ಗೋಕಾಕ್ ತಾಲೂಕಿನ ಕೊಣ್ಣೂರ ಗ್ರಾಮದಲ್ಲಿರುವ ಕರ್ನಲ್ ಸೋಫಿಯಾ ಖುರೇಶಿ ಅವರ ಪತಿ ಮನೆ ಮೇಲೆ ಆರೆಸ್ಸೆಸ್ ಕಾರ್ಯಕರ್ತರು ದಾಳಿ ನಡೆಸಿದ್ದಾರೆ ಎಂದು ಎಕ್ಸ್ ಖಾತೆಯಲ್ಲಿ ಆರೋಪಿ ಅನೀಸ್ ಉದ್ದೀನ್ ಎಂಬಾತ ಮನೆ ಧ್ವಂಸದ ಯಾವುದೋ ಹಳೇ ಫೋಟೋವನ್ನು ಬಳಸಿ ಪೋಸ್ಟ್ ಹಾಕಿದ್ದು, ಇದು ತೀವ್ರ ಚರ್ಚೆಗೆ ಗ್ರಾಸವಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ್‌ ಗುಳೇದ್‌, ಈ ಕುರಿತು ಪರಿಶೀಲಿಸಿ, ಸುಳ್ಳು ಸುದ್ದಿ ಎಂದು ಸ್ಪಷ್ಟನೆ ನೀಡಿದ್ದರು.

ಈ ಸಂಬಂಧ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಎಸ್ಪಿ ಭೀಮಾಶಂಕರ್ ಗುಳೇದ್‌, ಪೊಲೀಸ್ ತನಿಖೆ ವೇಳೆ ಅನೀಸ್ ಉದ್ದೀನ್ ಕೆನಡಾದ ಬ್ರಿಟಿಷ್‌ ಕೊಲಂಬಿಯಾ ನಿವಾಸಿ ಎಂಬ ಮಾಹಿತಿ ಲಭ್ಯವಾಗಿದೆ. ಮನೆ ಧ್ವಂಸದ ಚಿತ್ರ, ಖುರೇಶಿ ಫೋಟೊ ಸಮೇತ ಸುಳ್ಳು ಸುದ್ದಿಯನ್ನು ಅನೀಸ್ ಉದ್ದೀನ್ ಪೋಸ್ಟ್ ಮಾಡಿದ್ದ. ಈ ರೀತಿ ಸುಳ್ಳು ಸುದ್ದಿ ಹಬ್ಬಿಸಿದ್ದ ಆರೋಪದಡಿ ಪೊಲೀಸರು ಸ್ವಯಂ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು, ಆತನನ್ನು ಕೂಡಲೇ ಬಂಧಿಸುತ್ತೇವೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News